ಬೆಂಗಳೂರು: ಏರ್ಫೋರ್ಸ್ ಅಧಿಕಾರಿ, ವಿಂಗ್ ಕಮಾಂಡರ್ ಶಿಲಾದಿತ್ಯ ಹಾಗೂ ಟೆಕ್ಕಿ ವಿಕಾಸ್ ಕುಮಾರ್ ನಡುವಿನ ಗಲಾಟೆ ದೇಶಮಟ್ಟದಲ್ಲಿ ಸದ್ದು ಮಾಡಲಾರಂಭಿಸಿದೆ. ಅಲ್ಲದೇ ಈ ಪ್ರಕರಣ ಸಂಬಂಧ ಸಾಮಾಜಿಕ ಜತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಕೊಲೆ ಯತ್ನ ಪ್ರಕರಣದಲ್ಲಿ ಭಾರತೀಯ ವಾಯುಸೇನೆಯ (ಐಎಎಫ್) ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳದಂತೆ ರಾಜ್ಯ ಪೊಲೀಸರಿಗೆ ಆದೇಶಿಸಿರುವ ಹೈಕೋರ್ಟ್, ಇದೇ ವೆಳೆ ತನಿಖೆಗೆ ಸಹಕರಿಸುವಂತೆ ಬೋಸ್‌ಗೆ ಸೂಚಿಸಿದೆ.
ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಮತ್ತು ಆನಂತರದ ನ್ಯಾಯಿಕ ಪ್ರಕ್ರಿಯೆ ರದ್ದತಿ ಕೋರಿ ಪಶ್ಚಿಮ ಬಂಗಾಳದ ಐಎಎಫ್ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಏಕಸದಸ್ಯ ಪೀಠ ಗುರುವಾರ ವಿಚಾರಣೆ ನಡೆಸಿತು.
ಹಿರಿಯ ವಕೀಲ ಎಂ ಅರುಣ ಶ್ಯಾಮ್ ಅವರ ವಾದ ಆಲಿಸಿದ ಪೀಠವು ಬೈಯಪ್ಪನಹಳ್ಳಿ ಪೊಲೀಸರು ಶಿಲಾದಿತ್ಯ ಬೋಸ್ ವಿರುದ್ದ ಬಲವಂತದ ಕ್ರಮಕೈಗೊಳ್ಳಬಾರದು. ಕಾನೂನು ಪರಿಪಾಲಿಸದೇ ಅರ್ಜಿದಾರರಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಬಾರದು. ಅರ್ಜಿದಾರರು ತನಿಖೆಗೆ ಸಹಕರಿಸಬೇಕು. ನ್ಯಾಯಾಲಯದ ಅನುಮತಿ ಪಡೆಯದೇ ಆರೋಪ ಪಟ್ಟಿಯನ್ನು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಬಾರದು ಎಂದು ಆದೇಶಿಸಿತು.
ಬೈಯಪ್ಪನಹಳ್ಳಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ದೂರುದಾರ ಎಸ್ ಜೆ ವಿಕಾಸ್ ಕುಮಾರ್‌ಗೆ ತುರ್ತು ನೋಟಿಸ್ ಜಾರಿ ಮಾಡಲಾಗಿದೆ.
ಬೆಂಗಳೂರಿನ 26 ವರ್ಷದ ಎಸ್ ಜೆ ವಿಕಾಸ್ ಕುಮಾರ್ ನೀಡಿದ ದೂರಿನ ಅನ್ವಯ ಬೈಯ್ಯಪ್ಪನಹಳ್ಳಿ ಠಾಣೆಯ ಪೊಲೀಸರು ಶಿಲಾದಿತ್ಯ ಬೋಸ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳಾದ 109 (ಕೊಲೆ ಯತ್ನ), 115(2) (ಸ್ವಇಚ್ಛೆಯಿಂದ ಹಾನಿ ಮಾಡುವುದು), 304 (ಕಳವು ಮಾಡಲು ಮುಂದಾಗುವುದು), 324 (ಕಿರುಕುಳ), 351 (ಬೆದರಿಕೆ), 352 (ಶಾಂತಿಗೆ ಭಂಗ ಉಂಟು ಮಾಡಲು ಉದ್ದೇಶಪೂರ್ವಕವಾಗಿ ಅವಮಾನಿಸುವುದು) ಅಡಿ ಪ್ರಕರಣ ದಾಖಲಿಸಿದ್ದಾರೆ.