ಬೆಂಗಳೂರು : ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣ ಸಂಬಂಧ ಮಾಜಿ ಜನರಲ್ ಮ್ಯಾನೇಜರ್ ಬಂಧಿಸಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕ ಡಾ.ಬಿ.ಕೆ.ನಾಗರಾಜಪ್ಪ ಅವರನ್ನು ಬಂಧಿಸಿದ್ದು, ಕೋರ್ಟ್ಗೂ ಹಾಜರುಪಡಿಸಿದ್ದಾರೆ.
ಕಳೆದ ಶುಕ್ರವಾರ ಇಡಿ ಅಧಿಕಾರಿಗಳ ತಂಡ ನಾಗರಾಜಪ್ಪ, ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಲೀಲಾವತಿ ಮತ್ತು ಅಧೀಕ್ಷಕರಾಗಿದ್ದ ಪಿ.ಡಿ.ಸುಬ್ಬಪ್ಪ ಅವರಿಗೆ ಸೇರಿದ 10 ಸ್ಥಳಗಳ ಮೇಲೆ ರೇಡ್ ಮಾಡಿದ್ದು, ಪರಿಶೀಲನೆ ನಡೆಸಿದರು. ಈ ವೇಳೆ ಬ್ಯಾಂಕ್ ಖಾತೆಗಳ ವಿವರ, ಸ್ಥಿರಾಸ್ತಿ-ಚರಾಸ್ತಿಗಳು, ಸಂಬಂಧಿಕರ ಹೆಸರಿನಲ್ಲಿ ಸಂಪಾದನೆ ಮಾಡಿದ್ದ ಆಸ್ತಿ ಮತ್ತಿತರ ದಾಖಲೆಗಳು ಲಭ್ಯವಾಗಿದ್ದವು. ಈ ಬಗ್ಗೆ ವಿಚಾರಣೆ ವೇಳೆ ಸರಿಯಾದ ಮಾಹಿತಿ ನೀಡದ ಕಾರಣ ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎನ್ನಲಾಗಿದೆ.
ಭೋವಿ ಅಭಿವೃದ್ಧಿ ನಿಗಮದ ಉದ್ಯಮಶೀಲತಾ ಯೋಜನೆ ಮತ್ತು ನೇರ ಸಾಲ ಯೋಜನೆಗಳಡಿ ಲಕ್ಷಾಂತರ ರು. ಸಾಲ ಕೊಡಿಸುವುದಾಗಿ ಮಧ್ಯವರ್ತಿಗಳ ಮೂಲಕ ಆಮಿಷವೊಡ್ಡಿ ಸಾರ್ವಜನಿಕರ ಗುರುತಿನ ದಾಖಲೆಗಳು, ಬ್ಯಾಂಕ್ ಚೆಕ್ ಪಡೆದು ದುರ್ಬಳಕೆ ಮಾಡಿಕೊಂಡು ಅವ್ಯವಹಾರ ನಡೆಸಲಾಗಿತ್ತು. ಅಕ್ರಮ ಹಣ ವರ್ಗಾವಣೆ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.