ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು ಹಿರಿಯರು ಹೇಳುವ ಈ ಗಾದೆ ಮಾತು ಕಿವಿಮೇಲೆ ಹಾಕಿಕೊಂಡು ಮಾತಾಡಿದ್ದರೆ ಇವತ್ತು ಬಿಗ್ ಬಾಸ್ ಮಾಜಿ ಸ್ಪರ್ಧಿ ರಕ್ಷಕ್ ಬುಲೆಟ್ ಗೆ ಸಂಕಷ್ಟ ಬರುತ್ತಿರಲಿಲ್ಲವೇನು. ಮೊದಲಿನಿಂದಲೂ ಈ ಹುಡ್ಗ ಆಡುವ ಮಾತುಗಳು ಟ್ರೋಲ್ ಆಗುತ್ತಲೇ ಇರುತ್ತವೆ. ಟ್ರೋಲ್ ಆದ್ರೆ ಸಮಸ್ಯೆ ಇಲ್ಲ ಹಲವರ ಭಾವನೆಗಳಿಗೆ ಧಕ್ಕೆ ತಂದರೆ ಸಂಕಷ್ಟವೇ. ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ರಕ್ಷಕ್ ಬುಲೆಟ್ ಅವಹೇಳನಕಾರಿಯಾಗಿ ಮಾತನಾಡಿದ್ದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
ರಕ್ಷಕ್ ಬುಲೆಟ್ ವಿರುದ್ಧ ಇಂದು ಹಿಂದೂ ಕಾರ್ಯಕರ್ತ ಮಹೇಶ್ ಎಂಬುವವರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರಿಗೆ ದೂರು ಸಲ್ಲಿಸಿದ್ದಾರೆ. ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ. ರಕ್ಷಕ್ ಬುಲೆಟ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರಕ್ಷಕ್ ಹೇಳಿದ್ದೇನು?
ರಕ್ಷಕ್ ಹಾಗೂ ರಮೋಲಾ ಜೋಡಿಗೆ ‘ಬುಲ್ ಬುಲ್’ ಸಿನಿಮಾದ ದೃಶ್ಯವನ್ನ ರೀ-ಕ್ರಿಯೇಟ್ ಮಾಡಲು ಟಾಸ್ಕ್ ನೀಡಲಾಗಿತ್ತು. ‘ನಾವೂ ಮಂಡ್ಯದವರೆ ಕಂಡ್ರಿ. ನಿಮ್ಮನ್ನ ನೋಡ್ತಾ ಇದ್ದಂತೆ ಅಂದುಕೊಂಡೆ, ತಾಯಿ ಚಾಮುಂಡೇಶ್ವರಿಯೇ ಬೆಟ್ಟದಿಂದ ಇಳಿದು, ಸೀರೆ, ಒಡವೆಗಳನ್ನೆಲ್ಲ ಬಿಚ್ಚಿಟ್ಟು, ಜೀನ್ಸ್, ಟೀ ಶರ್ಟ್ ಹಾಕಿ, ಸ್ವಿಟ್ಜರ್ಲೆಂಡ್‌ನಲ್ಲಿ ಟ್ರಿಪ್ ಹೊಡೀತಾ ಇದಾರೆ ಅಂತ’ ಅನ್ನೋ ಡೈಲಾಗ್ ಹೊಡೆದಿದ್ದಾರೆ.
ರಕ್ಷಕ್ ಬುಲೆಟ್ ಮಾತು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ. ಹೀಗಾಗಿ ಬಿಗ್ ಬಾಸ್ ಮಾಜಿ ಸ್ಪರ್ಧಿ ರಕ್ಷಕ್ ಬುಲೆಟ್ ಹಾಗೂ ಖಾಸಗಿ ವಾಹಿನಿಯಲ್ಲಿ ಕಾರ್ಯಕ್ರಮ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೂ ಸಂಘಟನೆಗಳು ಆಗ್ರಹಿಸಿವೆ.