ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಸಾಮಾಜಿಕ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬದಂದು ಬಡ ಕುಟುಂಬಳಿಗೆ ಸೂರು ಕಟ್ಟಿಸಿ ಕೊಡುವ ಭರವಸೆ ನೀಡಿದ್ದರು. ನುಡಿದಂತೆ ರೂಪೇಶ್ ಶೆಟ್ಟಿ ನಡೆದಿದ್ದು, ಬಡ ಕುಟುಂಬವೊಂದಕ್ಕೆ ಮನೆ ಕಟ್ಟಿಸಿ ಕೊಟ್ಟಿದ್ದಾರೆ. ಈ ಮನೆಯ ಗೃಹಪ್ರವೇಶ ಕೂಡ ಆಗಿದ್ದು, ಮನೆಗೆ ʻಪ್ರೇಮ ನಿಲಯʼ ಎಂದು ಹೆಸರಿಟ್ಟಿದ್ದಾರೆ. ಈ ಮೂಲಕ ರಿಯಲ್ ಲೈಫ್ನಲ್ಲಿಯೂ ರೂಪೇಶ್ ಶೆಟ್ಟಿ ಹೀರೋ ಆಗಿದ್ದಾರೆ.
ರೂಪೇಶ್ ಶೆಟ್ಟಿ “ನೆಮ್ಮದಿ” ಅನ್ನುವ ಒಂದು ಚಾರಿಟೇಬಲ್ ಟ್ರಸ್ಟ್ ಹುಟ್ಟುಹಾಕಿದ್ದಾರೆ. ಈ ನೆಮ್ಮದಿ ಸಂಸ್ಥೆ ಮೂಲಕ ಮತ್ತಷ್ಟು ಒಳ್ಳೆ ಕೆಲಸ ಮಾಡೋ ಉದ್ದೇಶ ಇದೆ. ಈ ಒಂದು ಸಂಸ್ಥೆಯನ್ನ ಹೊಸ ಮನೆಯ ಗೃಹಪ್ರವೇಶದ ದಿನವೇ ಉದ್ಘಾಟಿಸಿದ್ದಾರೆ. ಹಾಗೆ ಹೊಸ ಮನೆಯ ಅಂಗಳದಲ್ಲಿಯೇ ನಿಂತುಕೊಂಡು ವಿಷಯ ಹಂಚಿಕೊಂಡಿದ್ದಾರೆ. “ಕಷ್ಟದಲ್ಲಿರುವ ಕುಟುಂಬಕ್ಕೆ ಮನೆ ಕಟ್ಟಿ ಕೊಡುತ್ತೇನೆ ಎಂದು ನಾನು ನನ್ನ ಹುಟ್ಟುಹಬ್ಬದ ದಿನ ಒಂದು ವಿಡಿಯೋ ಮಾಡಿದ್ದೆ. ಇವತ್ತು ಆ ಮನೆಯ ಕೆಲಸ ಮುಗಿದು ಗೃಹ ಪ್ರವೇಶ ನಡೆಯುತ್ತಿದೆ. ನೆಮ್ಮದಿ ಚಾರಿಟಬಲ್ ಟ್ರಸ್ಟ್ ಅನ್ನು ಕೂಡ ನಾವು ಇಂದು ಲಾಂಚ್ ಮಾಡುತ್ತಿದ್ದೇವೆ. ಇದರ ಮುಖಾಂತರ ಇನ್ನಷ್ಟು ಇಂತಹ ಒಳ್ಳೆಯ ಕೆಲಸಗಳು ಆಗಬೇಕು ಅಂತ” ರೂಪೇಶ್ ಶೆಟ್ಟಿ ಹೇಳಿಕೊಂಡಿದ್ದಾರೆ.
“ಒಂದು ಬಡ ಕುಟುಂಬಕ್ಕೆ ನಮ್ಮ ತಂಡದಿಂದ ಮನೆ ಕಟ್ಟಿ ಕೊಡುವುದಾಗಿ ಹೇಳಿದ್ದೆ, ಈಗ ಆ ಕೆಲಸ ಪೂರ್ಣಗೊಂಡಿದೆ. ಗೃಹ ಪ್ರವೇಶವೂ ನೆರವೇರಿದೆ. ಇನ್ನಷ್ಟು ಇಂತಹ ಕೆಲಸಗಳನ್ನು ಮಾಡುವ ಉದ್ದೇಶದಿಂದ “ನೆಮ್ಮದಿ” ಎಂಬ ಚಾರಿಟಬಲ್ ಟ್ರಸ್ಟ್ ಕೂಡ ಶುರು ಮಾಡುತ್ತಿದ್ದೇವೆ. ನಮ್ಮ ಈ ಕೆಲಸದಲ್ಲಿ ನಿಮ್ಮ ಪ್ರೀತಿ ಹಾಗೂ ಆಶೀರ್ವಾದ ಸದಾ ಇರಲಿ” ಎಂದಿದ್ದಾರೆ.
ರೂಪೇಶ್ ಶೆಟ್ಟಿ ತುಳು ಚಿತ್ರರಂಗದಲ್ಲಿ ಖ್ಯಾತಿ ಪಡೆದವರು. ನಟನಾಗಿ ಮಾತ್ರವಲ್ಲದೇ ನಿರ್ದೇಶಕರಾಗಿಯೂ ಹೆಸರು ಮಾಡಿದ್ದಾರೆ. ಅಧಿಪತ್ರ ಎಂಬ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರೀಗೆ ಹೀರೋ ಆಗಿ ಬಂದಿದ್ದ ಅವರೀಗ, ʻಜೈʼ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ಖ್ಯಾತ ನಟ ,ತುಳು ಮನೆ ಮಗ ಸುನಿಲ್ ಶೆಟ್ಟಿ ನಟಿಸುತ್ತಿದ್ದಾರೆ.