ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಿಂದ 27ಕ್ಕೂ ಹೆಚ್ಚು ಪ್ರವಾಸಿಗರು ಅಸುನೀಗಿದ್ದಾರೆ. ಈ ದಾಳಿ ಬೆನ್ನಲ್ಲೇ ಇಡೀ ಭಾರತೀಯರು ಪಾಕ್ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.
ಅನೇಕ ಸೆಲೆಬ್ರಿಟಿಗಳು ದಾಳಿಯನ್ನು ಖಂಡಿಸಿ ಪಾಪಿಗಳ ಕೃತ್ಯದ ವಿರುದ್ಧ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಸಾಮಾಜಿಕ ಮಾಧ್ಯಮಗಳಲ್ಲಿ ಭಾರತೀಯ ಸಿನಿಮಾಗಳಲ್ಲಿ ಪಾಕಿಸ್ತಾನಿ ಕಲಾವಿದರು ಕೆಲಸ ಮಾಡಬಾರದು ಎಂದು ಆಕ್ರೋಶ ಶುರುವಾಗಿದೆ.
ಪ್ರಭಾಸ್ ಘೌಜಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಇಮಾನ್ವಿ ಇಸ್ಮಾಯಿಲ್ ಪಾಕಿಸ್ತಾನಿ ಮಿಲಿಟರಿ ವ್ಯಕ್ತಿಯ ಮಗಳು ಎಂಬ ಸುದ್ದಿ ಹರಿದಾಡುತ್ತಿದೆ. ಹೀಗಾಗಿ ಅವರನ್ನು ಚಿತ್ರದಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿದರು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಇಮಾನ್ವಿ, ನಾನು ಹೆಮ್ಮೆಯ ಭಾರತೀಯ-ಅಮೆರಿಕನ್ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ ಇಮಾನ್ವಿ, ‘ನನ್ನ ಬಗ್ಗೆ ಸುಳ್ಳು ಮಾಹಿತಿಗಳನ್ನು ಹರಿಬಿಡಲಾಗುತ್ತಿದೆ. ನನ್ನ ಕುಟುಂಬದ ಯಾರೂ ಸಹ ಎಂದಿಗೂ ಸಹ ಯಾವುದೇ ರೀತಿಯಲ್ಲಿಯೂ ಪಾಕಿಸ್ತಾನದ ಸೇನೆಯೊಟ್ಟಿಗೆ ಕೆಲಸ ಮಾಡಿಲ್ಲ. ನಾನು ಪಾಕಿಸ್ತಾನದವಳಲ್ಲ, ನಾನೊಬ್ಬ ಹೆಮ್ಮೆಯ ಭಾರತೀಯ ಮೂಲದ ಅಮೆರಿಕನ್ ಪ್ರಜೆ. ನಾನು ಹಿಂದಿ, ತೆಲುಗು, ಗುಜರಾತಿ ಮತ್ತು ಇಂಗ್ಲೀಷ್ ಭಾಷೆಗಳನ್ನು ಮಾತನಾಡಬಲ್ಲವಳಾಗಿದ್ದೇನೆ. ನಾನು ಹುಟ್ಟಿರುವುದು ಕ್ಯಾಲಿಫೋರ್ನಿಯಾದ ಲಾಸ್ ಏಂಜಲ್ಸ್ನಲ್ಲಿ. ನನ್ನ ಪೋಷಕರು ಯುವಕರಾಗಿದ್ದಾಗಲೇ ಅಮೆರಿಕಕ್ಕೆ ವಲಸೆ ಬಂದಿದ್ದರು. ನಾನು ಕಲೆ, ನಟನೆ ಮತ್ತು ನೃತ್ಯದ ಅಭ್ಯಾಸ ಮಾಡಿದ್ದೇನೆ. ನನ್ನ ಜೀವನದ ಮೇಲೆ ಭಾರತೀಯ ಸಿನಿಮಾದ ಪ್ರಭಾವ ಸಾಕಷ್ಟಿದೆ. ಈಗ ಅದೇ ಚಿತ್ರರಂಗದಿಂದ ನನಗೆ ಅವಕಾಶ ಸಿಕ್ಕಿರುವುದು ನನಗೆ ಖುಷಿ ಇದೆ’ ಎಂದಿದ್ದಾರೆ.