ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲದ ಕಡೆ ತೆರಳುತ್ತಿದ್ದ ಕೆ.ಎಸ್. ಆರ್.ಟಿ.ಸಿ ಬಸ್ಸು ಚಲಿಸುತ್ತಿದ್ದಂತೆ ಏಕಾಏಕಿ ಬ್ರೇಕ್ ಫೇಲ್ ಆಗಿತ್ತು. ಈ ವೇಳೆ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಬಸ್ ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು ಮಾಡಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲದತ್ತ ತೆರಳುತ್ತಿದ್ದ ಭಕ್ತಾಧಿಗಳಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ತಾಳುಬೆಟ್ಟದ ಪೊನ್ನಾಚಿ ಕ್ರಾಸ್ ಬಳಿ ತಿರುವಿನೊಂದರಲ್ಲಿ ಬ್ರೇಕ್ ಫೇಲ್ ಆಗಿದೆ . ಇದನ್ನು ಗಮನಿಸಿದ ಚಾಲಕ ತನ್ನ ಸಮಯ ಪ್ರಜ್ಞೆಯಿಂದ ಹಳ್ಳಕ್ಕೆ ಬೀಳಬೇಕಾಗಿದ್ದ ಬಸ್ ನ್ನು ತಡೆಗೋಡೆಯ ಮೇಲೆ ಹತ್ತಿಸಿ, ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ.
ಬಸ್ ಚಾಲಕನ ಸಮಯ ಪ್ರಜ್ನೆ ಯನ್ನು ಸಾರ್ವಜನಿಕರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಕಳೆದ ಶನಿವಾರ ರಾತ್ರಿ ಬ್ರೇಕ್ ಫೆಲ್ ಆಗಿದ್ದ ಬಸ್ಸು ಕಂದಕಕ್ಕೆ ಬಿದ್ದು 20 ಜನರಿಗೆ ಗಂಭೀರವಾದ ಗಾಯಗಳಾಗಿ ಬದುಕಿದ್ದೆ ಪವಾಡ ಎನಿಸಿತ್ತು.
ಇದಾದ ಕೆಲವೇ ಗಂಟೆಯಲ್ಲಿ ಮತ್ತೊಂದು ಬಸ್ ಬ್ರೆಕ್ ಫೇಲ್ಯೂರ್ ಆಗಿದ್ದು ಸಾರಿಗೆ ಬಸ್ ವ್ಯವಸ್ಥೆ ಬಗ್ಗೆ ಸಾರ್ವಜನಿಕರು ವ್ಯಾಪಕಆಕ್ರೋಶ ವ್ಯಕ್ತ ಪಡಿಸಿದ್ದಾರೆ. ತಿರುವಿಗಳಿರುವ ಮಲೆಮಹದೇಶ್ವರ ಬೆಟ್ಟದಲ್ಲಿ ಬಸ್ಸುಗಳು ಸುಸಜ್ಜಿತವಾಗಿರಬೇಕು. ಆದರೆ ಸಾರಿಗೆ ಇಲಾಖೆ ನಿರ್ಲಕ್ಚ್ಯದಿಂದ ಸರಣಿ ಅಪಘಾತ ಸಂಭವಿಸಿದೆ. ಇನ್ನಾದರೂ ಸುಸಜ್ಜಿತ ವಾಹನಗಳನ್ನು ಮಲೆಮಹದೇಶ್ವರಬೆಟ್ಟಕ್ಕೆ ಬಿಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.