ಬೆಲೆ ಏರಿಕೆಯಿಂದ ಬೆಂದಿರುವ ಜನತೆಗೆ ಕೇಂದ್ರ ಸರ್ಕಾರ ಗಾಯದ ಮೇಲೆ ಬರೆ ಎಳೆದಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಎರಡು ರೂಗಳಷ್ಟು ಹೆಚ್ಚಿಸಿದೆ. ಹೀಗಾಗಿ ರಾಜ್ಯದ ಜನರಿಗೆ ಡಬಲ್ ಶಾಕ್ ಎದುರಾಗಿದೆ. ಇತ್ತೀಚೆಗಷ್ಟೇ ಕರ್ನಾಟಕ ಸರ್ಕಾರ ಡೀಸೆಲ್ ಮೇಲೆ ಎರಡು ರೂ ಹೆಚ್ಚುವರಿ ತೆರಿಗೆ ಹೇರಿತ್ತು. ಈಗ ಕೇಂದ್ರದಿಂದ ಎರಡು ರೂ ಅಬಕಾರಿ ಸುಂಕ ಹೆಚ್ಚಳ ಆಗಿದೆ.
ಗ್ರಾಹಕರಿಗೆ ಹೊರೆ ಆಗಲ್ಲ ಕೇಂದ್ರ ಸ್ಪಷ್ಟನೆ!
ಎರಡು ರೂ ಅಬಕಾರಿ ಸುಂಕ ಹೆಚ್ಚಳ ಮಾಡಿದರೂ ಗ್ರಾಹಕರ ಮೇಲೆ ಯಾವುದೇ ಹೊರೆಯಾಗುವುದಿಲ್ಲ ಎಂದು ಕೇಂದ್ರ ಸ್ಪಷ್ಟನೆ ಕೊಟ್ಟಿದೆ. ತೈಲ ಕಂಪನಿಗಳ ಮೇಲೆ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 2 ರೂ. ಅಬಕಾರಿ ಸುಂಕವನ್ನು ಏರಿಕೆ ಮಾಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಏರಿಕೆ ಮಾಡುವ ನಿರ್ಧಾರ ಕೈಗೊಂಡಿದೆ. ಏಪ್ರಿಲ್ 8, 2025 ರಿಂದ ಹೊಸ ದರಗಳು ಅನ್ವಯವಾಗಲಿದ್ದು, “ಏಪ್ರಿಲ್ 8, 2025 ರಿಂದ ಬದಲಾವಣೆ ಜಾರಿಗೆ ಬರಲಿದೆ,” ಎಂದು ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.