ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಮೊಬೈಲ್ ಕಳ್ಳತನ ಪ್ರಕರಣದಲ್ಲಿ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಐದು ಸಾವಿರಕ್ಕೂ ಅಧಿಕ ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಏನಿದು ಪ್ರಕರಣ ಅನ್ನೋದನ್ನ ನೋಡೋದಾದರೆ. ಕಳೆದ 2024ರ ನವೆಂಬರ್ 23ರಂದು ರಾಷ್ಟ್ರೀಯ ಹೆದ್ದಾರಿ-44ರ ಮೂಲಕ ಉತ್ತರಪ್ರದೇಶದ ನೋಯ್ಡಾದಿಂದ ಬೆಂಗಳೂರು ಕಡೆಗೆ ಬರೋಬ್ಬರಿ 6,640 ಮೊಬೈಲ್‌ಗಳನ್ನ ಹೊತ್ತಿದ್ದ ಟ್ರಕ್‌ವೊಂದು ಬಂದಿತ್ತು. ಆದರೆ ಈ ಟ್ರಕ್ ಬೆಂಗಳೂರನ್ನು ತಲುಪದ ಕಾರಣ ಕಂಪನಿಯವರು ಜಿಪಿಎಸ್ ಮೂಲಕ ಚೆಕ್ ಮಾಡಿಸಿದಾಗ ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ರೆಡ್ಡಿಗೊಲ್ಲವಾರಹಳ್ಳಿ ಬಳಿ ಡಾಬಾ ವೊಂದರ ಬಳಿ ಟ್ರಕ್ ಪತ್ತೆಯಾಗಿತ್ತು. ಆದರೆ ಟ್ರಕ್‌ನಲ್ಲಿದ್ದ 6640 ಮೊಬೈಲ್‌ಗಳಲ್ಲಿ ಸುಮಾರು 5140 ಮೊಬೈಲ್‌ಗಳನ್ನು ಕಳ್ಳತನ ಮಾಡಲಾಗಿತ್ತು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಢು ತನಿಖೆ ನಡೆಸಿದ ಪೇರೇಸಂದ್ರ ಹಾಗೂ ಸೆನ್ ಪೊಲೀಸರು ಹರಿಯಾಣ, ರಾಜಸ್ಥಾನ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿದ್ದು, ಇದೀಗ 7 ಮಂದಿ ಆರೋಪಿಗಳನ್ನ ಬಂಧಿಸಿದ್ದಾರೆ. ಟ್ರಕ್ ಚಾಲಕ ರಾಹುಲ್, ಇಮ್ರಾನ್, ಮೊಹಮ್ಮದ್ ಮುಸ್ತಫಾ, ಅನೂಪ್ ರಾಯ್, ಅಭಿಜಿತ್ ಪೌಲ್, ಸಕೃಲ್ಲಾ ಹಾಗೂ ಯೂಸುಫ್ ಖಾನ್ ಬಂಧಿತ ಆರೋಪಿಗಳು. ಬಂಧಿತರಿಂದ ಮೊಬೈಲ್ ಸಾಗಾಟ ಮಾಡಲು ಬಳಸಿದ್ದ ಟ್ರಕ್ ಸೇರಿ ಕಳವು ಮಾಡಿದ್ದ 5,140 ಮೊಬೈಲ್‌ಗಳ ಪೈಕಿ 56 ಮೊಬೈಲ್‌ಗಳನ್ನ ಜಪ್ತಿ ಮಾಡಿದ್ದಾರೆ.
ಸರಿಸುಮಾರು ನಾಲ್ಕೂವರೆ ಕೋಟಿ ಮೌಲ್ಯದ ಮೊಬೈಲ್‌ಗಳನ್ನ ಕಳ್ಳರು ದೆಹಲಿಯಲ್ಲಿ ಕೇವಲ 90 ಲಕ್ಷ ರೂಪಾಯಿಗೆ ಕಾಳಸಂತೆಯಲ್ಲಿ ಮಾರಾಟ ಮಾಡಿದ್ದರು ಎಂಬುದು ವಿಚಾರಣೆಯಲ್ಲಿ ಪತ್ತೆಯಾಗಿದೆ. ಇದಲ್ಲದೇ ಪ್ರಕರಣದಲ್ಲಿನ ಪ್ರಮುಖ ಆರೋಪಿಗಳು 2 ವರ್ಷಗಳ ಹಿಂದೆ ಬಂಗಾಳದಲ್ಲಿ ನಡೆದಿರೋ 9 ಕೋಟಿಯ ಐಪೋನ್ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದ್ದು, ಈ ಸಂಬಂಧ ಕೂಡ ವಿಚಾರಣೆ ನಡೆಯುತ್ತಿದೆ.