ತಮಿಳಿನ ಜನಪ್ರಿಯ ನಟ ‘ಚಿಯಾನ್’ ವಿಕ್ರಮ್ ಅಭಿನಯದ ‘ವೀರ ಧೀರ ಶೂರನ್ – ಭಾಗ 2’ ಚಿತ್ರವು ಮಾರ್ಚ್ 27ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಕರ್ನಾಟಕದಲ್ಲೂ ಚಿತ್ರ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದ್ದು, ಈ ಚಿತ್ರದ ಪ್ರಚಾರಕ್ಕಾಗಿ ವಿಕ್ರಮ್ ಇತ್ತೀಚೆಗೆ ಬೆಂಗಳೂರಿಗೆ ಬಂದು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಮಲ್ಲೇಶ್ವರಂನ ಮಂತ್ರಿ ಮಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಿಕ್ರಮ್, ‘ಇದು ನನ್ನ ಪಾಲಿಗೆ ವಿಶೇಷವಾದ ಚಿತ್ರ. ಇದೊಂದು ಮಾಸ್ ಚಿತ್ರ. ಅಷ್ಟೇ ನೈಜವಾಗಿಯೂ ಇದೆ. ಚಿತ್ರದಲ್ಲಿ ಎಲ್ಲರ ಪಾತ್ರಗಳಿಗೂ ಪ್ರಾಮುಖ್ಯತೆ ಇದೆ. ಚಿತ್ರ ಎಮೋಷನಲ್ ಆಗಿ ಮೂಡಿಬಂದಿದೆ. ಹಾಡು, ಫೈಟ್‍ಗಳೆಲ್ಲಾ ಮಾಸ್ ಆಗಿ ಮೂಡಿಬಂದಿವೆ. ಸಾಮಾನ್ಯವಾಗಿ ಒಂದು ಚಿತ್ರ ನಾಯಕನ ಪರಿಚಯದಿಂದ ಶುರುವಾಗಿ, ಹಾಡು, ಫೈಟು ಎಂದು ಮುಂದುವರೆಯುತ್ತದೆ. ಇಲ್ಲಿ ಎಲ್ಲವೂ ವಿಭಿನ್ನ. ನಾಯಕನ ಪರಿಚಯ, ಇಂಟರ್‍ವೆಲ್ ಬ್ಲಾಕ್ ಎಲ್ಲವೂ ಬೇರೆ ತರಹ ಇದೆ. ಈ ಚಿತ್ರದ ಮೂಲಕ ಹೊಸ ಪ್ರಯೋಗ ಮಾಡಿದ್ದೇವೆ’ ಎಂದರು.
ಈ ಚಿತ್ರವು ಎರಡು ಭಾಗಗಳಲ್ಲಿ ಮೂಡಿಬರುತ್ತಿದ್ದು, ಈ ಪೈಕಿ ಎರಡನೇ ಭಾಗ ಮೊದಲು ಬಿಡುಗಡೆಯಾಗುತ್ತಿದೆ. ಆ ನಂತರ ಮೊದಲ ಭಾಗ ಬರಲಿದೆ. ಎರಡನೇ ಭಾಗ ಮೊದಲು ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ವಿಕ್ರಮ್, ‘ಈ ಕಥೆ ಕೇಳಿದಾಗ ಬಹಳ ರೋಮಾಂಚನವಾಯಿತು. ಕಥೆಯಲ್ಲಿ ಸಾಕಷ್ಟು ವಿಷಯಗಳಿವೆ. ಅದರಲ್ಲೂ ಫ್ಲಾಶ್‍ಬ್ಯಾಕ್ ದೃಶ್ಯಗಳು ಬಹಳ ಇಂಟರೆಸ್ಟಿಂಗ್ ಆಗಿದೆ. ಅದೇ ಒಂದು ಪ್ರತ್ಯೇಕವಾದ ಕಥೆ ಇದ್ದಂತಿದೆ. ಆಮೇಲೆ ಚರ್ಚೆಯಲ್ಲಿ ಇನ್ನಷ್ಟು ವಿಷಯಗಳು ಬಂದವು. ಹಾಗಾಗಿ, ಮೊದಲು ಅಂದುಕೊಂಡಂತೆ ಈ ಚಿತ್ರ ಮಾಡಿ, ಬೇರೆ ವಿಷಯಗಳನ್ನು ಇನ್ನೊಂದು ಭಾಗದಲ್ಲಿ ಹೇಳೋಣ ಅಂತ ಈ ಚಿತ್ರ ಮಾಡಿದ್ದೇವೆ. ಇದು ಎರಡನೇ ಭಾಗದ ಕಥೆ. ಹಾಗಾಗಿ, ಮೊದಲು ಈ ಚಿತ್ರ ಮಾಡಿ, ಆ ನಂತರ ಮೊದಲ ಭಾಗ ಮಾಡುವ ಯೋಚನೆ ಇದೆ’ ಎಂದರು.
‘ವೀರ ಧೀರ ಶೂರನ್’ ಚಿತ್ರವನ್ನು ಅರುಣ್ ಕುಮಾರ್ ಬರೆದು ನಿರ್ದೇಶನ ಮಾಡಿದ್ದು, ಎಚ್.ಆರ್. ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ರಿಯಾ ಶಿಭು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ವಿಕ್ರಮ್, ಎಸ್.ಜೆ. ಸೂರ್ಯ, ಸೂರಜ್ ವೆಂಜಾರಮೂಡು, ಸಿದ್ಧಿಖ್, ದುಶಾರಾ ವಿಜಯನ್ ಮುಂತಾದವರು ಅಭಿನಯಿಸಿದ್ದು, ಚಿತ್ರಕ್ಕೆ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ.