ಬೆಂಗಳೂರು: ಪಾಕ್ ಉಗ್ರರ ವಿರುದ್ಧ ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ನಡೆಸಿದೆ. ಮಾಹಿತಿಗಳ ಪ್ರಕಾರ 80ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ. ಬೆನ್ನಲ್ಲೇ ಭಾರತದಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಸೇನೆಯ ಪರಾಕ್ರಮದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದ್ದಾರೆ. ಕಾವೇರಿ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ದೇಶದ ಸೇನಾಪಡೆ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿ ಪರಾಕ್ರಮ ಮೆರೆದಿದ್ದಾರೆ. ದೇಶದ ರಾಜ್ಯದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ರಾಷ್ಟ್ರೀಯ ಭದ್ರತೆ ವಿಷಯಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ. ಈ ದಾಳಿಯನ್ನು ಎಲ್ಲರೂ ಬೆಂಬಲಿಸಿದ್ದೇವೆ. ಇದು ಪಾಕಿಸ್ತಾನಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ನಮ್ಮ ಸರ್ಕಾರ ನೂರಕ್ಕೆ ನೂರರಷ್ಟು ಸೇನೆ ಕೈಗೊಂಡಿರುವ ಕ್ರಮವನ್ನು ಬೆಂಬಲಿಸುತ್ತದೆ ಎಂದರು.
ಆಪರೇಷನ್ ಸಿಂಧೂರ ಹೆಸರಿನಲ್ಲಿ ಸುಮಾರು 9 ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿದೆ. ಕೇವಲ ಉಗ್ರಗಾಮಿಗಳ ನೆಲೆಗಳ ಮೇಲೆ ಮಾತ್ರ ದಾಳಿ ನಡೆಸಲಾಗಿದೆ. ನಮ್ಮ ಸೈನಿಕರು ಉಗ್ರರ ನೆಲೆಗಳನ್ನು ಪತ್ತೆ ಹಚ್ಚಿ ದಾಳಿ ಮಾಡಿದ್ದು, ಅಮಾಯಕ ಜನರ ಸಾವು ನೋವು ತಪ್ಪಿಸಿದ್ದಾರೆ. ನಮ್ಮ ಸೈನಿಕರ ಕಾರ್ಯದಕ್ಷತೆಗೆ ದೊಡ್ಡ ಸಲಾಂ. ಈ ದಾಳಿಯನ್ನು ನಾವು ಸ್ವಾಗತಿಸುತ್ತೇವೆ.
ಕಾಶ್ಮೀರದ ಪಹಲ್ಗಾಂವ್ನಲ್ಲಿ ಅಮಾಯಕ 26ಜನ ಹತ್ಯೆ ನಡೆಸಿದ ಉಗ್ರರನ್ನು ಬೆಂಬಲಿಸುವವರು, ಸಾಕುವವರು ಸಹ ಪಾಕಿಸ್ತಾನದವರೇ ಎಂಬುವುದು ಸ್ಪಷ್ಟವಾಗಿದೆ. ನಾವು ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದೇವೆ. ರಾಜ್ಯದಲ್ಲಿ ಸುರಕ್ಷತೆಯ ಕುರಿತು ಎಲ್ಲಾ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ.
ಉಗ್ರರ ಮೇಲಿನ ದಾಳಿ ಹಿನ್ನೆಲೆಯಲ್ಲಿ ಸಂವಿಧಾನ ಉಳಿಸಿ ಅಡಿಯಲ್ಲಿ ರಾಯಚೂರಿನಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಕಾರ್ಯಕ್ರಮನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದರು.
ನಾವು ಎಚ್ಚರ ವಹಿಸುವ ಕೆಲಸ ಮಾಡುತ್ತೇನೆ. ಕೇಂದ್ರ ಸರ್ಕಾರದ ಜೊತೆ ಮಾತನಾಡಿ ಸಂಪೂರ್ಣ ಬೆಂಬಲವನ್ನ ಕೊಡುತ್ತೇವೆ. ನಮ್ಮ ರಾಜ್ಯದಲ್ಲಿ ಎಲ್ಲಾ ಎಚ್ಚರಿಕಾ ಕ್ರಮ ತೆಗೆದುಕೊಳ್ಳುತ್ತದೆ. ಉಗ್ರರ ನೆಲೆ ಮೇಲಿನ ದಾಳಿಯಿಂದಾಗಿ ರಾಯಚೂರಿನ ರ್ಯಾಲಿಯನ್ನ ರದ್ದುಗೊಳಿಸಿದ್ದೇವೆ. ಕೇಂದ್ರ ಸರ್ಕಾರದ ಜೊತೆ ರಾಜ್ಯದ ಜನ ನಿಲ್ಲಬೇಕು ಎಂದು ಮನವಿ ಮಾಡುತ್ತೇನೆ ಎಂದರು.
ನಮ್ಮ ರಾಜ್ಯವನ್ನ ಆಲರ್ಟ್ ಆಗಿ ಇಡಬೇಕು. ರಾಜ್ಯದಲ್ಲೂ ಮಾಕ್ ಡ್ರಿಲ್ ನಡೆಯುತ್ತಿದೆ. ರಾಷ್ಟ್ರೀಯ ಭದ್ರತೆ ಮುಖ್ಯ, ರಾಜಿ ಇಲ್ಲ. ನೂರಕ್ಕೆ ನೂರು ರಾಷ್ಟ್ರದ ಜೊತೆ ಇರುತ್ತೇವೆ ಎಂದು ಹೇಳಿದರು. ರಾಜ್ಯ ಕಾಂಗ್ರೆಸ್ ಶಾಂತಿ ಟ್ವೀಟ್ ಹಾಕಿ ಡಿಲೀಟ್ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ಅದೊಂದು ಗಾಂಧಿ, ಬಸವಣ್ಣನವರ ಕಾಲ ಇತ್ತು. ಈಗ ನಾವು ಸುಮ್ಮನಿರೋದಕ್ಕೆ ಆಗುತ್ತಾ? ಬೇರೆ ಯಾವುದೇ ಟೀಕೆಗಳಿಗೆ ಪ್ರತಿಕ್ರಿಯಿಸಲ್ಲ ಎಂದರು.