ಬೆಂಗಳೂರು, ಏಪ್ರಿಲ್ 26:ದೇಶ ಸಂಕಷ್ಟದಲ್ಲಿರುವ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಆಡಿರುವ ಮಾತು ಆಘಾತ ತಂದಿದೆ. ಮತ ಸಿಕ್ಕಿದರೆ ಸಾಕು ಎಂಬ ಮನಸ್ಥಿತಿ ಅವರಿಗೆ ಬಂದಿರುವುದು ನಾಚಿಕೆಗೇಡಿನ ಸಂಗತಿ ಹಾಗೂ ಖಂಡನೀಯ. ಈ ಕುರಿತು ಸಿಎಂ ಸಿದ್ದರಾಮಯ್ಯ ಜನರ ಬಳಿ ಕ್ಷಮೆ ಯಾಚಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
Pahalgam Terror Attack: ದೇಶದ ಭದ್ರತಾ ವೈಫಲ್ಯ ಎದ್ದು ಕಾಣುತ್ತಿದೆ – ಶಾಸಕ ಎಸ್.ಎನ್.ನಾರಾಯಣಸ್ವಾಮಿ!
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಸ್ರೇಲ್‌ನಲ್ಲಿ ನಾಗರಿಕರು ಸಂಭ್ರಮಿಸುತ್ತಿರುವಾಗ ಅವರನ್ನು ಕೊಂದಂತೆಯೇ, ಜಮ್ಮು ಕಾಶ್ಮೀರದಲ್ಲೂ ಭಯೋತ್ಪಾದಕರು ಹಿಂದೂಗಳ ಹತ್ಯೆ ಮಾಡಿದ್ದಾರೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಕ್ಷಮಿಸಬಹುದು. ದೇಶಕ್ಕೇನಾದರೂ ಆಗಲಿ ಪರವಾಗಿಲ್ಲ, ಮತ ಸಿಕ್ಕಿದರೆ ಸಾಕು ಎಂಬ ಮನಸ್ಥಿತಿ ಅವರಿಗೆ ಬಂದಿರುವುದು ನಾಚಿಕೆಗೇಡಿನ ಸಂಗತಿ. ಅವರು ಯಾವುದೇ ಸಿದ್ಧಾಂತ ಇಲ್ಲದ ವ್ಯಕ್ತಿ. ಅವರಿಗೆ ಅಧಿಕಾರದಲ್ಲಿದ್ದರೆ ಸಾಕು ಎಂದರು.
ದೇಶಾದ್ಯಂತ ಜನರು ಪ್ರತಿಭಟನೆ ನಡೆಸುತ್ತಿರುವಾಗ, ಹೋದ ಜೀವಗಳನ್ನು ವಾಪಸ್ ತರಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ಘಟನೆ ಅವರ ಕುಟುಂಬಕ್ಕೆ ಆಗಿದ್ದರೆ ಅವರ ಮಾತು ಹೀಗೆ ಇರುತ್ತಿರಲಿಲ್ಲ. ಕರುಣೆ ಇಲ್ಲದೆಯೇ ಈ ರೀತಿ ಮಾತನಾಡಿ, ಬಳಿಕ ಸಂತ್ರಸ್ತರ ಮನೆಗೆ ಭೇಟಿ ನೀಡಿದ್ದಾರೆ. ಅಲ್ಲಿ ಹೋಗಿ ಹಾರ ಹಾಕಿ ಇಲ್ಲಿ ಬಂದು ಹೀಗೆ ಮಾತಾಡುತ್ತಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ತೀರ್ಮಾನದ ಜೊತೆಗೆ ನಿಲ್ಲುತ್ತೇವೆ ಎಂದಿದ್ದಾರೆ. ಇಲ್ಲಿ ಸಿಎಂ ಸಿದ್ದರಾಮಯ್ಯ ಮನೆ ಮುರಿಯುವ ಮಾತನಾಡಿದ್ದಾರೆ ಎಂದು ದೂರಿದ್ದಾರೆ.
ಭಟ್ಕಳದಲ್ಲಿ ಪಾಕಿಸ್ತಾನದ ಸುಮಾರು ಹನ್ನೆರಡು ಪ್ರಜೆಗಳಿದ್ದಾರೆ. ಕೇಂದ್ರ ಸರ್ಕಾರ ಹೊರಗೆ ಹಾಕಿ ಎಂದು ಸೂಚಿಸಿದ್ದರೂ, ರಾಜ್ಯ ಸರ್ಕಾರ ಏನೂ ಮಾಡಿಲ್ಲ. ಕಲಬುರ್ಗಿಯಲ್ಲಿ ಪಾಕಿಸ್ತಾನದ ಧ್ವಜವನ್ನು ರಸ್ತೆಗೆ ಅಂಟಿಸಿದರೆ ಮುಸ್ಲಿಂ ಮಹಿಳೆಯರು ಅದನ್ನು ತೆಗೆದುಹಾಕಿದ್ದಾರೆ. ನಮ್ಮ ದೇಶದ ಒಳಗೆಯೇ ಶತ್ರುಗಳಿದ್ದಾರೆ. ಇಂತಹ ಮೀರ್ ಸಾಧಿಕ್‌ಗಳ ಕಡೆಗೆ ಗಮನಹರಿಸಬೇಕು. ಪಾಕಿಸ್ತಾನಕ್ಕೆ ಅಪಮಾನ ಮಾಡಿದ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಇದರಿಂದ ಕಾಂಗ್ರೆಸ್‌ನ ಬಣ್ಣ ಬಯಲಾಗಿದೆ. ರಾಜ್ಯದಲ್ಲಿರುವ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಪ್ರಜೆಗಳನ್ನು ಒದ್ದು ಹೊರಗೆ ಹಾಕಬೇಕು ಎಂದು ಒತ್ತಾಯಿಸಿದರು.
ಭಾರತೀಯ ಯೋಧರು ಹಾಗೂ ಗುಪ್ತಚರ ಸಂಸ್ಥೆ ಕೆಲಸ ಮಾಡುತ್ತಿರುವುದರಿಂದಲೇ ಸಚಿವ ಸಂತೋಷ್ ಲಾಡ್ ಆರಾಮಾಗಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್ ಮೈತ್ರಿ ಸರ್ಕಾರವೇ ಇದೆ. ಅಲ್ಲಿನ ಸರ್ಕಾರವನ್ನೇ ಇವರು ಪ್ರಶ್ನೆ ಮಾಡಬೇಕಿದೆ. ದೇಶಕ್ಕೆ ಸಂಕಷ್ಟ ಬಂದಾಗ ಹೇಗಿರಬೇಕೆಂದು ಕಾಂಗ್ರೆಸ್ ನಾಯಕರು ಕಲಿಯಬೇಕು. ಇವರೆಲ್ಲರ ಹೇಳಿಕೆಯನ್ನು ಜನರು ಗಮನಿಸಿದ್ದಾರೆ ಎಂದರು.
ಎಲ್ಲೆಲ್ಲಿ ಹೇಗೆ ಭದ್ರತೆ ಇರಬೇಕು ಎಂಬುದನ್ನು ಸರ್ಕಾರ ಹಾಗೂ ರಾಜ್ಯಪಾಲರ ಅಭಿಪ್ರಾಯದ ಮೇರೆಗೆ ನಿಯೋಜಿಸಲಾಗುತ್ತದೆ. ಜಮ್ಮು-ಕಾಶ್ಮೀರ ಸರ್ಕಾರ ಹೇಗೆ ನಡೆದುಕೊಂಡಿದೆ ಎಂಬುದು ಮುಖ್ಯ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡಾಗ ಕಾಂಗ್ರೆಸ್ ಸರ್ಕಾರ ಏನು ಮಾಡುತ್ತಿತ್ತು? ಇಲ್ಲಿಯೂ ಅತ್ಯಾಚಾರ, ಬ್ಯಾಂಕ್ ದರೋಡೆ ನಡೆಯುತ್ತಿದೆ. ಹಾಗಾದರೆ ಇಲ್ಲಿ ಏಕೆ ಗುಪ್ತಚರ ದಳ ವಿಫಲವಾಗಿದೆ? ನಾವೆಲ್ಲರೂ ಒಂದೇ ಧ್ವನಿಯಲ್ಲಿ ಮಾತನಾಡಬೇಕು. ಆದರೆ ಸಿಎಂ ಸಿದ್ದರಾಮಯ್ಯ ವೋಟ್ ಬ್ಯಾಂಕ್ ಧ್ವನಿಯಲ್ಲಿ ಮಾತಾಡುತ್ತಿದ್ದಾರೆ ಎಂದರು.
ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಲೇಬೇಕೆಂದು ದೊಡ್ಡಬಳ್ಳಾಪುರದಲ್ಲಿ ನೋಟಿಸ್ ನೀಡಲಾಗಿದೆ. ಇದು ದೊಡ್ಡ ಕರ್ಮಕಾಂಡ. ಸ್ಮಾರ್ಟ್ ಮೀಟರ್ ವಿಚಾರದಲ್ಲಿ ಕೋರ್ಟ್ ನೀಡಿದ ತಡೆಯಾಜ್ಞೆ ಸ್ವಾಗತಾರ್ಹವಾದುದು ಎಂದರು.