ಕೊಡಗು: : ಜೊತೆಗಿದ್ದ ಮಹಿಳೆಯೊಂದಿಗೆ ಕಲಹ ಏರ್ಪಟ್ಟ ಹಿನ್ನೆಲೆ ಯುವಕ ವೀಡಿಯೋ ಮಾಡಿ ನೇಣಿಗೆ ಶರಣಾದ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿ ನಡೆದಿದೆ. ಕೆ. ಬೋಯಿಕೇರಿ ಮೂಲದ ಚೆಸ್ಕಾಂನಲ್ಲಿ ಕಂಬ ಅಳವಡಿಸುವ ಕೆಲಸ ಮಾಡುತ್ತಿದ್ದ ಸಾಗರ್ (30) ಮೃತ ದುರ್ದೈವಿಯಾಗಿದ್ದಾನೆ.
ಚೆಸ್ಕಾಂನಲ್ಲಿ ಕೆಲಸ ಮಾಡುವುದರ ಜೊತೆಗೆ ಆಟೋ ಚಾಲನೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಸಾಗರ್ ಕಳೆದ 8 ವರ್ಷಗಳಿಂದ ವಿವಾಹಿತ ಮಹಿಳೆಯೊಂದಿಗೆ ಜೀವನ ನಡೆಸುತ್ತಿದ್ದ. ಎರಡು ದಿನಗಳ ಹಿಂದೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಕಲಹ ಏರ್ಪಟ್ಟಿದೆ. ಕೇರಳದ ಕೊಟ್ಟಿಯೂರು ದೇವಾಲಯಕ್ಕೆ ತೆರಳಿ ಹಿಂದಿರುಗಿದ ಸಾಗರ್ ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಮನೆಗೆ ಬಂದು ಮಹಿಳೆಗೆ ಕರೆ ಮಾಡಿದ್ದಾನೆ. ಆದರೆ, ಪ್ರತಿಕ್ರಿಯೆ ಬಾರದ ಹಿನ್ನೆಲೆ ನೊಂದು ಮೊಬೈಲ್‌ನಲ್ಲಿ ವಿಡಿಯೋ ಚಿತ್ರಿಸಿಕೊಂಡು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಇಬ್ಬರ ನಡುವಿನ ಕಲಹದಲ್ಲಿ ಮಹಿಳೆ ಗಾಯಗೊಂಡು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಆಕೆಯ ಮಗ ಆಧಾರ್ ಕಾರ್ಡ್ ತರಲೆಂದು ಮನೆಗೆ ಬಂದು ನೋಡಿದ ಸಂದರ್ಭ ಸಾಗರ್ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಮೃತನ ತಾಯಿ ಎನ್.ಎನ್. ಸರೋಜ ಅವರು ನೀಡಿರುವ ದೂರಿನ ಅನ್ವಯ ವೀರಾಜಪೇಟೆ ನಗರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತನ ಕುಟುಂಬ ವರ್ಗಕ್ಕೆ ಹಸ್ತಾಂತರ ಮಾಡಲಾಗಿದೆ.