ಬೆಂಗಳೂರು: ಅತ್ಯಾಚಾರ ಆರೋಪದಡಿ ಬಂಧನವಾಗಿರುವ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನುಗೆ ಕೋರ್ಟ್ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದೆ. ನಾಳೆ ಮನು ಕಸ್ಟಡಿಗೆ ಅಂತ್ಯವಾಗುತಿತ್ತು. ಹೀಗಾಗಿ ಇಂದೇ ಪೊಲೀಸರು ಆರೋಪಿಯನ್ನು ಕೋರ್ಟ್ ಗೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ 3ನೇ ಎಸಿಜೆಎಂ ನ್ಯಾಯಾಲಯದ ಆರೋಪಿ ಮನುಗೆ 14 ದಿನ ನ್ಯಾಯಾಂಗ ಬಂಧನ ನೀಡಿದ್ದು, ಪರಪ್ಪನ ಅಗ್ರಹಾರದ ಕಂಬಿ ಹಿಂದೆ ಕಿಲಾಡಿ ಮನು ಲಾಕ್ ಆಗಿದ್ದಾನೆ.
ಸಹನಟಿಗೆ ಕಿರುಕುಳ, ಲೈಂಗಿಕ ದೌರ್ಜನ್ಯ, ವಂಚನೆ ಪ್ರಕರಣದಲ್ಲಿ ನಟ ಮಡೆನೂರು ಮನುವನ್ನು ಅನ್ನಪೂರ್ಣೇಶ್ವರಿ ನಗರದ ಪೊಲೀಸರು ಬಂಧಿಸಿದ್ದರು. ಇಂದು ಮಲ್ಲತ್ತಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿದ ಬಳಿಕ ಕೋರ್ಟ್ ಗೆ ಆರೋಪಿಯನ್ನು ಪೊಲೀಸರು ಹಾಜರುಪಡಿಸಿದರು. ಮುಂದಿನ ತನಿಖೆಗೆ ಆರೋಪಿ ಅಗತ್ಯವಿಲ್ಲ ಎಂದು ಪೊಲೀಸರು ಹೇಳಿದ್ದು, ಹೀಗಾಗಿ ಕೋರ್ಟ್ ಆರೋಪಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.
ಸಹನಟಿಗೆ ಲೈಂಗಿಕ ದೌರ್ಜನ್ಯ ಎಸೆಗಿ, ವಿಡಿಯೋ ಮಾಡಿ, ಮನು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದರು. ಅದರಂತೆ ಮನು ಸಿನಿಮಾ ರಿಲೀಸ್ ದಿನವೇ ಅರೆಸ್ಟ್ ಆಗಿದ್ದು, ಸಂತ್ರಸ್ತೆ ಹಾಗೂ ಆರೋಪಿಯನ್ನು ಪೊಲೀಸರು ತೀವ್ರ ತನಿಖೆ ನಡೆಸಿದ್ದಾರೆ. ಆರೋಪಿಯನ್ನು ರೆಸಾರ್ಟ್, ಮನೆಗೆ ಕರೆದುಕೊಂಡು ಹೋಗಿ ಮಹಜರು ಮಾಡಲಾಗಿದೆ. ಪೊಲೀಸರ ತನಿಖೆ ಬಹುತೇಕ ಮುಗಿದಿದ್ದು, ಆರೋಪಿ ಜೈಲಲ್ಲಿ ಮುದ್ದೆ ಮರಿಯುವಂತಾಗಿದೆ.