ಚಾಮರಾಜನಗರ:- ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಮೊದಲ ಆದ್ಯತೆ ನೀಡಬೇಕು. ಕುಡಿಯುವ ನೀರಿನ ಯೋಜನೆ ಕಾಮಗಾರಿಗಳಿಗೆ ಯಾವುದೇ ವಿಳಂಬ ಮಾಡದೇ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಸೂಚಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಹವಾಮಾನ, ಕುಡಿಯುವ ನೀರು ನಿರ್ವಹಣೆ, ಜಾನುವಾರುಗಳ ಮೇವು ಹಾಗೂ ಅರಣ್ಯ ಇಲಾಖೆಗೆ ಸಂಬಂಧಿಸಿದ ಪ್ರಸ್ತಾವನೆಗಳು ಮತ್ತು ಇತರೆ ಇಲಾಖೆ ವಿಷಯಗಳ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕುಡಿಯುವ ನೀರಿಗೆ ಅಧಿಕಾರಿಗಳು ಪ್ರಥಮ ಪ್ರಾಶಸ್ತ್ಯ ನೀಡಬೇಕು. ಜಲ ಜೀವನ್ ಮಿಷನ್ (ಜೆಜೆಎಂ) ಅಡಿ ಗ್ರಾಮಗಳಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿಯನ್ನು ಸಂಪೂರ್ಣವಾಗಿ ಮುಗಿಸಿದ ಬಳಿಕವಷ್ಟೇ ಆಯಾಯ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಬೇಕು. ಈ ಬಗ್ಗೆ ದೂರು ಕೇಳಿ ಬರುತ್ತಿದೆ. ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಪರಿಶೀಲಿಸಿ ಕ್ರಮವಹಿಸಬೇಕು ಎಂದು ನಿರ್ದೇಶನ ನೀಡಿದರು.
ಹೊಂಗನೂರು, ಇರಸವಾಡಿ, ಕೆಂಪನಪುರ ಗ್ರಾಮ ಪಂಚಾಯಿತಿಗಳಿಗೆ ಆಯಾ ಗ್ರಾಮಗಳ ವ್ಯಾಪ್ತಿಯಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಹಸ್ತಾಂತರ ಮಾಡಲಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನಿಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ಅವರು ಪ್ರಸ್ತಾಪಿಸಿದ್ದಾರೆ. ಕಾಮಗಾರಿ ಪೂರ್ಣಗೊಳಿಸದ ಹೊರತು ಹೇಗೆ ಗ್ರಾಮ ಪಂಚಾಯಿತಿಗಳಿಗೆ ವಹಿಸುತ್ತೀರಿ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಜಗದೀಶ್ ಅವರನ್ನು ಸಚಿವರು ಪ್ರಶ್ನಿಸಿದರು.
ನಗರ, ಪಟ್ಟಣ ಪ್ರದೇಶಗಳಲ್ಲಿಯೂ ಸಹ ನೀರು ಸರಬರಾಜಿನಲ್ಲಿ ಯಾವುದೇ ತೊಂದರೆಯಾಗಬಾರದು. ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಇರುವ ಕ್ರಮಗಳ ಬಗ್ಗೆ ಮುತುವರ್ಜಿ ವಹಿಸಬೇಕು. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಕುಡಿಯುವ ನೀರಿನ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂದು ಸಚಿವರು ಹೇಳಿದರು.
ಕೃಷಿ ಚಟುವಟಿಕೆಗಳಿಗೆ ಪೂರಕವಾದ ಬಿತ್ತನೆಬೀಜ, ರಸಗೊಬ್ಬರ ಇನ್ನಿತರ ಪರಿಕರಗಳಿಗೆ ಯಾವುದೇ ತೊಂದರೆ ಯಾಗಬಾರದು. ಜಾನುವಾರುಗಳು ರೋಗದಿಂದ ಮರಣ ಹೊಂದಿದಾಗ ನೀಡುವ ಪರಿಹಾರವನ್ನು ವಿಳಂಬ ಮಾಡಬಾರದು. ಮೇವು ದಾಸ್ತಾನು ಸಹ ಅಗತ್ಯಕ್ಕನುಗುಣವಾಗಿ ಇರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ತಿಳಿಸಿದರು.
ಬಿ.ಎಸ್.ಎನ್.ಎಲ್. ಸಂಪರ್ಕ ಹಾಗೂ ಅರಣ್ಯ ಇಲಾಖೆಗೆ ಸಂಬಂಧಿಸಿದ ಪ್ರಸ್ತಾವನೆಗಳಿಗೆ ಕುರಿತು ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಮೇಜರ್ ಪಿ. ಮಣಿವಣ್ಣನ್ ಅವರು ಬಂಡೀಪುರದಲ್ಲಿ ಸ್ಥಾಪಿಸಲಾಗುವ ಟವರ್ ಗೆ ಅವಶ್ಯವಿರುವ ಸೋಲಾರ್ ಸಂಪರ್ಕಕಕ್ಕೆ ಫಿಲ್ಲರ್‍ಗಳನ್ನು ನಿರ್ಮಾಣ ಮಾಡಬೇಕು. ಪ್ರಸ್ತಾವನೆಯನ್ನು ಕಳುಹಿಸಿ ಈ ಸಂಬಂಧ ಪರಿಶೀಲಿಸಿ ಮುಂದಿನ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಅರಣ್ಯ ಇಲಾಖೆಯ ವ್ಯಾಪ್ತಿಯೊಳಗೆ ಕೈಗೊಳ್ಳಬೇಕಿರುವ ಕಾಮಗಾರಿಗಳ ಅನುಷ್ಠಾನ ಸಂಬಂಧ ಪರಿಶೀಲನೆ ಮಾಡಬೇಕು. ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರೊಂದಿಗೆ ತಾವು ಸಹ ಮಾತನಾಡಲಿದ್ದು ಗಮನಕ್ಕೆ ತರಲಾಗುವುದು. ಯಾವುದೇ ತೊಡಕುಗಳಿದ್ದರೂ ಪರಿಹರಿಸಿಕೊಳ್ಳಬೇಕು ಎಂದು ಮೇಜರ್ ಪಿ. ಮಣಿವಣ್ಣನ್ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ ಕುಡಿಯುವ ನೀರಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿ ಶುದ್ದತೆಯ ಬಗ್ಗೆ ಖಾತರಿಪಡಿಸಿಕೊಳ್ಳಲಾಗುತ್ತಿದೆ. ಬೆಳಹಾನಿ, ವಸತಿ ಹಾನಿಯಂತಹ ಪ್ರಕರಣಗಳಿಗೆ ನಿಯಮಾನುಸಾರ ಪರಿಶೀಲಿಸಿ ತ್ವರಿತವಾಗಿ ಪರಿಹಾರ ಕಲ್ಪಿಸಲಾಗುತ್ತಿದೆ. ಪರಿಹಾರ ಪೋರ್ಟಲ್‍ನ ಎಡಿಟ್ ಆಪ್ಶನ್ ತಾಂತ್ರಿಕ ತೊಡಕು ನಿವಾರಣೆ ಯಾಗಬೇಕಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಮಾತನಾಡಿ ಹನೂರು ಭಾಗದಲ್ಲಿ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆಯಿದೆ. ಕೌದಳ್ಳಿ ಭಾಗದಲ್ಲಿ ಬೋರ್‍ವೆಲ್ ಕೊರೆಸಲು ಸ್ಥಳ ಗುರುತಿಸಲಾಗಿದೆ. ಆದರೆ ಅರಣ್ಯ ಇಲಾಖೆ ಅನುಮತಿ ಅಗತ್ಯವಿದೆ. ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕಿದೆ ಎಂದರು.
ಶಾಸಕರಾದ ಹೆಚ್.ಎಂ. ಗಣೇಶ್ ಪ್ರಸಾದ್, ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ, ನಗರಸಭೆ ಅಧ್ಯಕ್ಷರಾದ ಸುರೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಎಫ್‍ಒ ಚಕ್ರಪಾಣಿ, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.