ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಾ ತ್ಯಾಜ್ಯ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಲು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಬಿ.ಎಸ್.ಡಬ್ಲ್ಯೂ.ಎಂ.ಎಲ್ ನ ಅಧ್ಯಕ್ಷರಾದ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ನಿಯಮಿತ(ಬಿ.ಎಸ್.ಡಬ್ಲ್ಯೂ.ಎಂ.ಎಲ್), ಸಿ40 ನಗರಗಳ ಸಹಯೋಗ, ಸೆನ್ಸಿಂಗ್ ಲೋಕಲ್ ನೇತೃತ್ವ ಹಾಗೂ ಸಾಹಸ್ ಸಂಸ್ಥೆಯ ಸಹಕಾರದೊಂದಿಗೆ ಇಂದು ಬಿ.ಎಸ್.ಡಬ್ಲ್ಯೂ.ಎಂ.ಎಲ್ ಕಛೇರಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಗರದಲ್ಲಿ ಘನತ್ಯಾಜ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುವ ಮೂಲಕ, ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚಿ, ತುರ್ತು ವೈದ್ಯಕೀಯ ಸಹಾಯ ಮಾಡಲು ತಿಳಿಸಿದರು. ತ್ಯಾಜ್ಯ ಕಾರ್ಮಿಕರು ಹಾಗೂ ಮೇಲ್ವಿಚಾರಣೆ ಅಧಿಕಾರಿಗಳೊಂದಿಗೆ ಪ್ರತಿ ತಿಂಗಳು ಸಭೆಗಳನ್ನು ನಡೆಸಬೇಕು. ಆ ಮೂಲಕ, ತಕ್ಷಣದ ಸಮಸ್ಯೆಗಳನ್ನು ಪತ್ತೆಹಚ್ಚಿ, ಸಂವಹನಕ್ಕೆ ವೇದಿಕೆ ಒದಗಿಸಿ ಒಟ್ಟಿಗೆ ಸಮಸ್ಯೆ ಪರಿಹಾರ ತಂತ್ರ ರೂಪಿಸಲು ಸೂಚಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಗುರುತಿಸಲಾದ ಒಣ ತ್ಯಾಜ್ಯ ಸಂಗ್ರಹಣಾ ಘಟಕಗಳನ್ನು ಬಲಪಡಿಸುವುದರ ಜೊತೆಗೆ, ಘಟಕಗಳಲ್ಲಿ ಕಾರ್ಯನಿರ್ವಹಿಸುವ ಕೆಲಸಗಾರರನ್ನು ಉದ್ಯಮಿಗಳಾಗುವ ವ್ಯವಸ್ಥೆಯನ್ನು ಮಾಡಲಾಗುವುದು. ಜೊತೆಗೆ ಗುರುತಿನ ಚೀಟಿಗಳನ್ನು ಕೂಡಾ ನವೀಕರಣ ಮಾಡಿ ನೀಡಲಾಗುವುದು ಎಂದು ತಿಳಿಸಿದರು.
ಬೆಂಗಳೂರು ಹವಾಮಾನ ಕ್ರಿಯೆ ಮತ್ತು ಸ್ಥಿತಿಸ್ಥಾಪಕತ್ವ ಯೋಜನೆಯಡಿ ತ್ಯಾಜ್ಯ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗಾಗಿ ಹವಾಮಾನ ಕ್ರಿಯೆಯ ಕುರಿತಾಗಿ ತರಬೇತಿ ಹಾಗೂ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅಭಿನಂದನೆಗಳನ್ನು ತಿಳಿಸಿದರು.
ಮಹಿಳೆಯರಲ್ಲಿ ಹೃದಯಾಘಾತ ಹೆಚ್ಚಾಗಲು ಕಾರಣ ಈ ಮಾತ್ರೆ ; ಈ ಬಗ್ಗೆ ಇರಲಿ ಎಚ್ಚರ..
5 ವಲಯಗಳಲ್ಲಿ ತರಬೇತಿ:
ನಗರದ ಪೂರ್ವ, ಪಶ್ಚಿಮ, ದಕ್ಷಿಣ, ಬೊಮ್ಮನಹಳ್ಳಿ ಹಾಗೂ ಮಹದೇವಪುರ ವಲಯ ಸೇರಿದಂತೆ ಐದು ವಲಯಗಳಲ್ಲಿ 600ಕ್ಕಿಂತ ಹೆಚ್ಚು ಮುಂಚೂಣಿಯ ತ್ಯಾಜ್ಯ ಕಾರ್ಮಿಕರು ಹಾಗೂ ಅಧಿಕಾರಿಗಳಿಗೆ ಮೂರು ಹಂತದ ತರಬೇತಿಗಳನ್ನು ನೀಡಲಾಗಿದೆ. ಮಾರ್ಚ್–ಜೂನ್ 2025ರ ನಡುವೆ ನಡೆದ ಸಾಮಾಜಿಕ ಸಂವಾದದ ಮೂಲಕ 75 ತ್ಯಾಜ್ಯ ಕಾರ್ಮಿಕರು ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡು ಪರಿಹಾರ ಮಾರ್ಗಗಳನ್ನು ರೂಪಿಸಿದ್ದಾರೆ.
ಮುಂಚೂಣಿ ಕಾರ್ಮಿಕರಿಗೆ ತರಬೇತಿ ನೀಡುವ ಉದ್ದೇಶ:
ಘನ ತ್ಯಾಜ್ಯ ನಿರ್ವಹಣೆಯು ಬೆಂಗಳೂರು ಹವಾಮಾನ ಕ್ರಿಯೆ ಮತ್ತು ಸ್ಥಿತಿಸ್ಥಾಪಕತ್ವ ಯೋಜನೆಯ(BCAP) ಪ್ರಮುಖ ಅಂಶವಾಗಿದೆ. ಈ ಹಿನ್ನೆಲೆಯಲ್ಲಿ ತ್ಯಾಜ್ಯ ವಿಭಾಗದಲ್ಲಿ ಕಾರ್ಯನಿವಹಿಸುತ್ತಿರುವ ಕಿರಿಯ ಆರೋಗ್ಯ ಪರಿವೀಕ್ಷಕರು, ಮಾರ್ಷಲ್ಗಳು, ಲಿಂಕ್ ವರ್ಕರ್ಸ್ಗಳು ಹಾಗೂ ಒಣ ತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಆಯಾ ವಲಯಮಟ್ಟದಲ್ಲಿ ತರಬೇತಿಗಳನ್ನು ಆಯೋಜಿಸಿ, ಅವರಿಗೆ ತ್ಯಾಜ್ಯ ವಿಲೇವಾರಿ, ಬಲ್ಕ್ ವೇಸ್ಟ್, ತ್ಯಾಜ್ಯದಿಂದ ಆದಾಯ ಗಳಿಸುವ, ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವ ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಸಮಗ್ರ ಮಾಹಿತಿ ನೀಡಲಾಗುತ್ತದೆ.
ಈ ವೇಳೆ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್, ಪ್ರೀತಿ ಗೆಹ್ಲೋಟ್, ವಲಯ ಆಯುಕ್ತರಾದ ಸ್ನೇಹಲ್, ರಮೇಶ್, ದಿಗ್ವಿಜಯ್ ಬೋಡ್ಕೆ, ಬಿ.ಎಸ್.ಡಬ್ಲ್ಯೂ.ಎಂ.ಎಲ್ ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ರಮಾಮಣಿ, ಮುಖ್ಯ ಅಭಿಯಂತರರಾದ ಲೋಕೇಶ್, ಬಸವರಾಜ್ ಕಬಾಡೆ, ಮಾರ್ಷಲ್ಗಳು, ಲಿಂಕ್ ವರ್ಕರ್ಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.