ಅಹಮದಾಬಾದ್ : ಬರೋಬ್ಬರಿ 64 ವರ್ಷಗಳ ಬಳಿಕ ಗುಜರಾತ್‌ನಲ್ಲಿ ಎಐಸಿಸಿ ಅಧಿವೇಶನ ನಡೆಯುತ್ತಿದೆ. ಸತತ ಎರಡು ಲೋಕಸಭೆ , ಹಲವು ವಿಧಾನಸಭೆಗಳಲ್ಲಿ ಸತತ ಸೋಲು ಅನುಭವಿಸಿರುವ ಕಾಂಗ್ರೆಸ್ ಇದೀಗ ಪಕ್ಷವನ್ನು ಪುನರಜ್ಜೀವನಗೊಳಿಸಲು ಗುರಿಯತ್ತ ಹೆಜ್ಜೆ ಇಟ್ಟಿದೆ.
ಇಂದಿನಿಂದ ಗುಜರಾತ್‌ನ ಅಹಮದಾಬಾದ್‌ನಲ್ಲಿ 89ನೇ ಕಾಂಗ್ರೆಸ್ ಮಹಾಅಧಿವೇಶನ ನಡೆಯಲಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ಅಧಿವೇಶನದಲ್ಲಿ ಮುಂದಿನ ಚುನಾವಣೆಗಳಲ್ಲಿನ ಗೆಲುವಿಗಾಗಿ ತಳ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಜಿಲ್ಲಾ ಘಟಕಗಳನ್ನು ಪುನರಚಿಸಲಿದೆ.
ವಕ್ಫ್ ತಿದ್ದುಪಡಿ ವಿಚಾರ ; ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಗದ್ದಲ -ಕೋಲಾಹಲ
ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಹಾರ ಚುನಾವಣೆ, ಮುಂದಿನ ವರ್ಷದಲ್ಲಿ ನಡೆಯಲಿರುವ ಕೇರಳ, ತಮಿಳುನಾಡು, ಪುದುಚೇರಿ, ಪಶ್ಚಿಮ ಬಂಗಾಲ ಮತ್ತು ಅಸ್ಸಾಂ ರಾಜ್ಯಗಳ ಚುನಾವಣೆಯ ಪೂರ್ವ ತಯಾರಿ ಚರ್ಚೆಗಳೂ ನಡೆಯಲಿವೆ. ಚುನಾವಣಾ ಕಾರ್ಯತಂತ್ರಗಳನ್ನು ಬಗ್ಗೆಯೂ ಚರ್ಚೆ ನಡೆಯಲಿದೆ.
ಸರ್ದಾರ್ ವಲ್ಲಭಬಾಯ್ ಪಟೇಲ್ ಸ್ಮಾರಕದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿದೆ. ಅದರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಹಿತ 169 ಮಂದಿ ನಾಯಕರು, ಕಾಂಗ್ರೆಸ್ ಚುನಾವಣಾ ಸಮಿತಿ ಸದಸ್ಯರು ಭಾಗಿಯಾಗಿದ್ದಾರೆ.
ನಾಳೆ ಅಂದರೆ ಬುಧವಾರ ಸಬರಮತಿ ನದಿ ದಂಡೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಮಹಾಅಧಿವೇಶನ ನಡೆಯಲಿದೆ. ಸಂಸದರು, ಎಐಸಿಸಿ ಸದಸ್ಯರು ಸೇರಿ 1725 ಮುಖಂಡರು ಭಾಗಿಯಾಗಲಿದ್ದಾರೆ.