ಬೈಂದೂರು :ಮೋದಿ ಅವರು ಪ್ರಧಾನಿಯಾದ ಮೇಲೆ ಚುನಾವಣೆಗೂ ಮುಂಚೆ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆಯೇ? ಬಡಜನರಿಗೆ, ಸಾಮಾನ್ಯ ಜನರಿಗೆ ಅಚ್ಛೇ ದಿನಗಳು ಬಂದಿವೆಯೇ’ ಎಂದು ರಾಜ್ಯ ಬಂದರು ಮತ್ತು ಮೀನುಗಾರಿಕಾ ಸಚಿವ ಮಂಕಾಳ್ ಎಸ್ ವೈದ್ಯ ಪ್ರಶ್ನಿಸಿದರು.
ಇಲ್ಲಿನ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಜೆ.ಎನ್.ಆರ್ ಕಲಾಮಂದಿರದ ಆವರಣದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಅರವಿಂದ ಪೂಜಾರಿ ಮತ್ತು ಮಾಜಿ ಶಾಸಕ ಗೋಪಾಲ ಪೂಜಾರಿಯವರ ನೇತ್ರತ್ವದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ‘ಬೆಲೆ ಏರಿಕೆ ನಿಯಂತ್ರಿಸದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನಾ ಸಮಾವೇಶ’ದಲ್ಲಿ ಅವರು ಮಾತನಾಡಿದರು.
ಮೋದಿ ಪ್ರಧಾನಿ ಆದಮೇಲೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಈ ತಪ್ಪನ್ನು ಮುಚ್ಚಿಕೊಳ್ಳಲು ಬಿಜೆಪಿಯವರು ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾದ ಮೇಲೆಯೂ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಎಲ್ಪಿಜಿ ದರ ಇಳಿಸಿಲ್ಲ. ಇದರಿಂದಾಗಿ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಕಾರಣವೆಂದು ಧೈರ್ಯದಿಂದ ಹಾಗೂ ಯಾವುದೇ ಮುಲಾಜಿಲ್ಲದೇ ಹೇಳಿ’ ಎಂದು ಜನರಿಗೆ ಕರೆ ನೀಡಿದರು.
ಸಭಾ ಕಾರ್ಯಕ್ರಮದ ಉದ್ಘಾಟನಾ ನೆರವೇರಿಸಿದ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ‘ಡಾ.ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನದ ಒಂದೊಂದು ಕಲಮುಗಳನ್ನು ತೆಗೆದುಹಾಕುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ಸಂವಿಧಾನ ತಿರಸ್ಕಾರ ಮಾಡುವ ಮುಖಂಡರಿಗೆ ಇದು ಎಚ್ಚರಿಕೆ’ ಎಂದರು. ‘ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ, ಮತ್ತೊಂದೆಡೆ ಆದಾಯ ಪಾತಾಳಕ್ಕೆ ಹೋಗುತ್ತಿದೆ. ಇಂತಹ ಸ್ಥಿತಿಯಲ್ಲಿ ಬಡವರಿಗೆ ಆರ್ಥಿಕ ಶಕ್ತಿ ತುಂಬಲು ರಾಜ್ಯದ ಕಾಂಗ್ರೆಸ್ ಸರ್ಕಾರವು, 5 ಗ್ಯಾರಂಟಿ ಯೋಜನೆಗಳನ್ನು ನೀಡಿದೆ’ ಎಂದರು.
ಕೇಂದ್ರದ ಬಿಜೆಪಿ ಸರ್ಕಾರವು ಉದ್ಯಮಿಗಳ ಕೋಟ್ಯಾಂತರ ರೂಪಾಯಿ ಸಾಲವನ್ನು ಮನ್ನಾ ಮಾಡಿದೆ. ಬಿಜೆಪಿ ಸರ್ಕಾರ ಶ್ರೀಮಂತರ ಪರವಾಗಿದ್ದರೆ, ನಮ್ಮದು ಬಡವರ ಪರವಾಗಿರುವ ಸರ್ಕಾರ’ ಎಂದು ಹೇಳಿದರು. ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಸಚಿವರಾದ ಜಯಪ್ರಕಾಶ್ ಹೆಗ್ಡೆ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಅಶೋಕ ಕೊಡವೂರು, ಜಿಲ್ಲಾ ಕಾಂಗ್ರೇಸ್ ಮುಖಂಡರುಗಳಾದ ಕೊಳ್ಕೆಬೈಲ್ ಕಿಶನ್ ಹೆಗಡೆ, ಪ್ರಖ್ಯಾತ್ ಶೆಟ್ಟಿ, ರಮೇಶ್ ಕಾಂಚನ್, ಪ್ರಸಾದ್ ರಾಜ್ ಕಾಂಚನ್, ಮೊಳಹಳ್ಳಿ ದಿನೇಶ್ ಹೆಗ್ಡೆ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಸ್.ರಾಜು ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು