ಬೆಂಗಳೂರು:- ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏರುತ್ತಿರುವ ಕೊರೊನಾ ಸೋಂಕಿತರ ಹಾಗೂ ಮೃತರ ಅಂಕಿ-ಸಂಖ್ಯೆಗಳ ಮಾಹಿತಿ ಪಡೆದರು.
ಸರ್ಕಾರಿ ಶಾಲೆಗಳತ್ತ ಒಲವು: ಮಕ್ಕಳ ದಾಖಲಾತಿ ಹೆಚ್ಚಳ.. ಖಾಸಗಿ ಶಾಲೆಗಳಿಗೆ ಗುಡ್ ಬೈ!
“ಕೊರೊನಾ ಹತೋಟಿಯಲ್ಲಿದ್ದು ಜನ ಭಯಪಡುವ ಸ್ಥಿತಿ ಇಲ್ಲ. ರಾಜ್ಯದಲ್ಲಿ ಕೊರೊನಾದಿಂದ ಮೃತಪಟ್ಟ 11 ಜನರಲ್ಲಿ 10 ಜನರ ಡೆತ್ ಆಡಿಟ್ ರಿಪೋರ್ಟ್ ಬಂದಿದೆ. ಈ 10 ಜನರು ಇತರ ಮಾರಕ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಅವರ ಸಾವಿಗೆ ಕೊರೊನಾ ಕಾರಣವಲ್ಲ. ಇನ್ನೊಬ್ಬರ ಡೆತ್ ಆಡಿಟ್ ವರದಿ ಬರುವುದು ಬಾಕಿ ಇದೆ” ಎಂದು ಸಚಿವ ದಿನೇಶ್ ಗುಂಡೂರಾವ್ ಸಿಎಂ ಸಿದ್ದರಾಮಯ್ಯರಿಗೆ ಮಾಹಿತಿ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ನಡೆಸಿದ ಸಭೆಯ ಮುಖ್ಯಾಂಶಗಳು:
• ಕೋವಿಡ್ ಬಗ್ಗೆ ಜನರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಆದರೂ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಬೇಕು.
• ರಾಜ್ಯದಲ್ಲಿ ಮೇ ತಿಂಗಳ ಬಳಿಕ ಕೋವಿಡ್ ಪರೀಕ್ಷೆ ಹೆಚ್ಚಿಸಲಾಗಿದೆ. ಈ ತಿಂಗಳು ಪ್ರತಿ ದಿನ ಸರಾಸರಿ 500 ಪರೀಕ್ಷೆ ನಡೆಸುತ್ತಿದ್ದೇವೆ.
• ಕಳೆದ 10ದಿನಗಳಲ್ಲಿ 5ಸಾವಿರ ಪರೀಕ್ಷೆ ನಡೆಸಲಾಗಿದ್ದು, 862 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 11ಸಾವು ಸಂಭವಿಸಿದೆ. ಆದರೂ ಇದರಲ್ಲಿ 10 ಪ್ರಕರಣಗಳಲ್ಲಿ ಕೋವಿಡ್ ಕಾರಣದಿಂದ ಸಾವು ಸಂಭವಿಸಿಲ್ಲ. ವಿವಿಧ ರೀತಿಯ ಅನಾರೋಗ್ಯಕ್ಕೆ ತುತ್ತಾಗಿದ್ದ ರೋಗಿಗಳು ಈ ಪ್ರಕರಣಗಳಲ್ಲಿ ಸಾವನ್ನಪ್ಪಿದ್ದಾರೆ. ಒಂದು ಪ್ರಕರಣದ ಆಡಿಟ್ ವರದಿ ಬರಬೇಕಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
• ಕೋವಿಡ್ ಬಗ್ಗೆ ಯಾರೂ ಅನಗತ್ಯ ಗೊಂದಲ ಮೂಡಿಸಬಾರದು. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಎಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ಪ್ರಕರಣಗಳನ್ನು ನಿಭಾಯಿಸಲು ಸೂಕ್ತ ವ್ಯವಸ್ಥೆಯನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.
• ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು.
• ಖಾಸಗಿ ಆಸ್ಪತ್ರೆಗಳಲ್ಲಿ ಅನಗತ್ಯವಾಗಿ ಕೋವಿಡ್ ಪರೀಕ್ಷೆ ಹೆಸರಿನಲ್ಲಿ ದುಬಾರಿ ಶುಲ್ಕ ವಿಧಿಸುತ್ತಿರುವ ದೂರುಗಳ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
• ಆರೋಗ್ಯ ಸಚಿವ ಡಾ.ದಿನೇಶ್ ಗುಂಡೂರಾವ್, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಮುಖ್ಯಮಂತ್ರಿ ಅವರ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.