ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೆಡಿ ಸಿನಿಮಾ ಅಖಾಡದಲ್ಲಿ ಬ್ಯುಸಿಯಾಗಿದ್ದಾರೆ. ಜೋಗಿ ಪ್ರೇಮ್ ಜೊತೆ ಫರ್ ದಿ ಫಸ್ಟ್ ಟೈಮ್ ಭರ್ಜರಿ ಗಂಡು ಕೈ ಜೋಡಿಸಿರುವುದು ಅಭಿಮಾನಿ ಬಳಗದಲ್ಲಿಯೂ ನಿರೀಕ್ಷೆ ಹೆಚ್ಚಿದೆ. ಕೆಡಿ ಚಿತ್ರಕ್ಕಾಗಿ ಧ್ರುವ ವಿಐಪಿಗಳು ಕಾತುರ ಆತುರದಿಂದ ಕಾಯ್ತಿದ್ದಾರೆ. ಈ ನಡುವೆಯೇ ಧ್ರುವ ಸರ್ಜಾ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಫ್ಯೂಚರ್ ಸಿಎಂ ಎಂದು ಭವಿಷ್ಯ ನುಡಿದ್ದಾರೆ.
ಸಿಎಂ ಗದ್ದುಗೇರಲು ಡಿಕೆಶಿ ಶತಪ್ರಯತ್ನ ಮಾಡುತ್ತಿದ್ದಾರೆ. ಅಪ್ಪನನ್ನು ರಾಜ್ಯದ ಮುಖ್ಯಮಂತ್ರಿಯಾಗಿ ನೋಡಲು ಮಗಳು ಐಶ್ವರ್ಯ ಹಾಗೂ ಅವರ ಪತ್ನಿ ಉಷಾ ಅವರಿಗೂ ಕನಸಿದೆ. ಆ ಕನಸು ಯಾವಾಗ ನನಸು ಆಗಲಿದೆ ಎಂದು ಇಡೀ ಕುಟುಂಬ ಎದುರು ನೋಡುತ್ತಿದೆ. ಇಂತಹ ಸಮಯದಲ್ಲಿ ಪೊಗರು ಪೋರ ಡಿಕೆ ಭವಿಷ್ಯದ ಸಿಎಂ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಯಲ್ಲಿ ಏರ್ಪಡಿಸಲಾಗಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಯುವಜನೋತ್ಸವ 2025 ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್, GAT ಅಧ್ಯಕ್ಷೆ ಉಷಾ ಶಿವಕುಮಾರ್, ನ್ಯಾಷನಲ್ ಎಜುಕೇಶನ್ ಫೌಂಡೇಶನ್ ಟ್ರಸ್ಟಿ ಸೆಕ್ರೆಟರಿ ಐಶ್ವರ್ಯ ಡಿ ಕೆ ಎಸ್ ಹೆಗ್ಡೆ, ಧ್ರುವ ಸರ್ಜಾ ಭಾಗಿಯಾಗಿದ್ದರು.
ಅಪ್ಪ ಡಿಕೆ, ಮಗಳ ಪಿಕೆ ಎಂದು ಡೈಲಾಗ್ ಮೂಲಕ ಮಾತು ಶುರು ಮಾಡಿದ ಧ್ರುವ ಸರ್ಜಾ, ಟೈಂ ಮ್ಯಾನೇಜ್ಮೆಂಟ್ ಅಂತಾ ಮಾತೋಡದ್ಕಿಂತ ಮುಂಚೆ ನಾನು ಅಣ್ಣನ ಕೇಳುತ್ತಿದ್ದೆ. ಅಣ್ಣಾ ಎಷ್ಟು ಗಂಟೆಗೆ ಮಲಗುತ್ತೀರಾ? ಎಷ್ಟು ಗಂಟೆಗೆ ಎದ್ದೇಳ್ತೀರಾ ಎಂದು. ಪಾಪ ಅವರು, ತಮ್ಮ ಬ್ಯುಸಿ ಶೆಡ್ಯೂಲ್ ಹೇಳಿದರು. ರಾತ್ರಿ 2.30 ಮಲಗಿಕೊಂಡು ಬೆಳಗ್ಗೆ 6.30ಗೆ ಎದ್ದೆ ಅಂದ್ರು. ಈ ಸ್ಥಾನಕ್ಕೆ ಬರೋದಕ್ಕೆ ಇದೇ ರೀತಿ ಎಷ್ಟೋ ವರ್ಷದಿಂದ ಮಾಡುತ್ತಿರುತ್ತಾರೆ. ನಾನು ಯಾರು ಬಗ್ಗೆ ಮಾತನಾಡುತ್ತಿದ್ದೇನೆ ಗೊತ್ತಾಯ್ತಾ..? ನಾನು ಫ್ಯೂಚರ್ ಸಿಎಂ ಬಗ್ಗೆ ಮಾತನಾಡ್ತಾ ಇದ್ದೀನಿ ಎಂದ ಆಕ್ಷನ್ ಪ್ರಿನ್ಸ್ ಡಿಕೆ ಶಿವಕುಮಾರ್ ಅವರನ್ನು ಹೊಗಳಿದ್ದಾರೆ. ಬಳಿಕ ವಿದ್ಯಾರ್ಥಿಗಳಿಗೆ ಧ್ರುವ ಸರ್ಜಾ ಕವಿ ಮಾತು ಹೇಳಿದ್ದಾರೆ.