ಬೆಂಗಳೂರು-ಭದ್ರಾ ಬಲದಂಡೆ ಕಾಲುವೆಯಿಂದ ಅವೈಜ್ಞಾನಿಕವಾಗಿ ನೀರನ್ನು ಎತ್ತಿ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೆಲವು ಭಾಗಗಳಿಗೆ ನೀರು ನೀಡಲು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗೊಂಡಿರುವ ನಿರ್ಧಾರ ಕೈಬಿಡಬೇಕು ಎಂದು ನಾಲೆಯ ಕೊನೆ ಭಾಗದ ರೈತರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ರೈತರ ಮನವಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು.
ಬೆಂಗಳೂರಿನ ಕುಮಾರಪಾರ್ಕ್ ಸರಕಾರಿ ನಿವಾಸದಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ರೈತರ ನಿಯೋಗವು ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿತು.
“ಕಳೆದ ಸರ್ಕಾರದ ಅವಧಿಯಲ್ಲಿ ದಿನಾಂಕ 9-11-2020ರಂದು ಆಗಿನ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಜಲಸಂಪನ್ಮೂಲ ಇಲಾಖೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭದ್ರಾ ಕಾಲುವೆ ಬಲದಂಡೆ 250 ಮೀಟರ್ ನಲ್ಲಿ ಚಾನೆಲ್ ಸೀಳಿ ಚಿತ್ರದುರ್ಗ ಜಿಲ್ಲೆಯ ಕೆಲವು ಪಟ್ಟಣ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೆಲವು ಗ್ರಾಮಗಳಿಗೆ ಕುಡಿಯುವ ನೀರು ನೀಡಲು ತೀರ್ಮಾನಿಸಲಾಗಿದೆ. ಅವೈಜ್ಞಾನಿಕವಾಗಿ ತೆಗೆದುಕೊಂಡಿರುವ ತೀರ್ಮಾನವನ್ನು ನಾವು ವಿರೋಧಿಸುತ್ತೇವೆ” ಎಂದು ರೈತರು ತಿಳಿಸಿದರು.
“ಈ ಭಾಗಕ್ಕೆ ಕುಡಿಯಲು ನೀರು ನೀಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಚಾನೆಲ್ ಸೀಳಿ ನೀರನ್ನು ಎತ್ತುವುದರಿಂದ ಭದ್ರಾ ಬಲದಂಡೆ ನಾಲೆಯ ಕೊನೆ ಭಾಗಕ್ಕೆ ನೀರು ತಲುಪದೇ ರೈತರಿಗೆ ಅನಾನುಕೂಲವಾಗಲಿದೆ. ಹೀಗಾಗಿ ಕೈಗೊಂಡಿರುವ ಈ ತೀರ್ಮಾನವನ್ನು ಕೈಬಿಡಬೇಕು. 365 ದಿನವೂ ನೀರು ಹರಿಯುವ ನದಿ ಭಾಗದಲ್ಲಿ ಜಾಕ್ ವೆಲ್ ನಿರ್ಮಿಸಿ ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು” ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, “ಇದು ಬಿಜೆಪಿ ಸರ್ಕಾರದ ಅವಧಿಯಲ್ಲಿ ತೆಗೆದುಕೊಂಡಿರುವ ತೀರ್ಮಾನ. ಈ ಬಗ್ಗೆ ನನಗೆ ಈಗಷ್ಟೇ ನಿಮ್ಮ ಮೂಲಕ ನನ್ನ ಗಮನಕ್ಕೆ ಬಂದಿದೆ. ಈ ವಿಚಾರವಾಗಿ ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.