ಬೆಂಗಳೂರು: ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆಗೆ ಕನ್ನಡ ಚಿತ್ರರಂಗದ ಕಲಾವಿದರ ಅನುಪಸ್ಥಿತಿಗೆ ಡಿಕೆಶಿ ಕೆಂಡಾಮಂಡಲವಾಗಿದ್ದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದೀಗ ಕನ್ನಡದ ಸಂಗೀತ ನಿರ್ದೇಶಕರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಕರ್ನಾಟಕದ ಹೆಮ್ಮೆಯ ಜೀವನದಿ ಕಾವೇರಿಗೆ ಗಂಗಾರತಿ ಮಾದರಿಯಲ್ಲಿ ‘ಕಾವೇರಿ ಆರತಿ’ ನಡೆಸುವ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರಕ್ಕೆ ಪೂರಕವಾಗಿ, ವಿಶೇಷ ಗೀತೆಯೊಂದನ್ನು ರಚಿಸಲು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಜಲಮಂಡಳಿ ಮತ್ತು ಕಾವೇರಿ ಆರತಿ ಸಮಿತಿಯ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಖ್ಯಾತ ಸಂಗೀತ ನಿರ್ದೇಶಕರಾದ ಶ್ರೀ ಹಂಸಲೇಖ, ಶ್ರೀ ಸಾಧು ಕೋಕಿಲ ಹಾಗೂ ಶ್ರೀ ಅರ್ಜುನ್ ಜನ್ಯ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯ ಸರ್ಕಾರವು ಕಾವೇರಿ ಆರತಿಯನ್ನು ಸಾಂಸ್ಕೃತಿಕವಾಗಿ ಮತ್ತು ಸಾಹಿತ್ಯಾತ್ಮಕವಾಗಿ ಶ್ರೀಮಂತಗೊಳಿಸುವ ಉದ್ದೇಶವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಜಾನಪದ ಸೊಬಗು, ಧಾರ್ಮಿಕತೆಯ ಮೆರಗು ಹಾಗೂ ಭಕ್ತಿ ಭಾವದಿಂದ ಕೂಡಿರುವ ಗೀತೆಯನ್ನು ರಚಿಸುವ ಅಗತ್ಯವಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಬದಲಾದ ಕಾಲಘಟ್ಟಕ್ಕೆ ಹೊಂದಿಕೊಳ್ಳುವಂತೆ, ವರ್ಣರಂಜಿತವಾಗಿ ಮೂಡಿಬರಲಿರುವ ಈ ಗೀತೆಯು ಕಾವೇರಿ ಮಾತೆಯ ಸಂಪೂರ್ಣ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತಿರಬೇಕು. ಕಾವೇರಿ ಮಾತೆಯ ಪರಂಪರೆಯನ್ನು ಉಳಿಸುವುದರ ಜೊತೆಗೆ, ಜಲ ಶ್ರೀಮಂತಿಕೆ ಸಹಿತ ಕಾವೇರಿ ವೈಭವವನ್ನು ದೇಶ ವಿದೇಶಗಳಿಗೆ ಹಾಡು ಮತ್ತು ಸಂಗೀತದ ಮೂಲಕ ಸಾರುವ ಹಾಗೂ ಆರತಿಯ ಮಹಿಮೆಯನ್ನು ಮೇಳೈಸುವ ಅದ್ಭುತವಾದ ಸಾಹಿತ್ಯ ಮತ್ತು ಗೀತ ಸಂಯೋಜನೆ ಆಗಬೇಕಿದೆ ಎಂದು ಡಿಸಿಎಂ ಶಿವಕುಮಾರ್ ಹೇಳಿದ್ದಾರೆ.
ರಚನೆಯಾದ ಈ ಗೀತೆಯನ್ನು ಧ್ವನಿ ಸುರಳಿ ರೂಪದಲ್ಲಿ ತಂದು, ಕಾವೇರಿ ಆರತಿ ಸಂದರ್ಭದಲ್ಲಿ ಬರುವ ಭಕ್ತಾದಿಗಳಿಗೆ ಕಣ್ಣು ತುಂಬಿಕೊಳ್ಳುವಂತೆ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ, ಕಾವೇರಿಯ ಮೆರುಗನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾವೇರಿ ಮಾತೆ ಹಾಗೂ ಕಾವೇರಿ ಆರತಿಗೆ ಸಂಬಂಧಿಸಿದಂತೆ ಗೀತ ರಚನೆ ಮಾಡುವಂತೆಯೂ, ಆಯ್ಕೆಯಾದ ಗೀತೆಯನ್ನು ಕಾವೇರಿ ಆರತಿ ಸಂದರ್ಭದಲ್ಲಿ ಪ್ರಸಾರ ಮಾಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ಅವರು ಪತ್ರದಲ್ಲಿ ತಿಳಿಸಿದ್ದಾರೆ. ಈ ಮೂಲಕ ಕಾವೇರಿ ನದಿಯ ಮಹತ್ವವನ್ನು ಸಾಂಸ್ಕೃತಿಕವಾಗಿ ಎತ್ತಿ ಹಿಡಿಯುವ ಮತ್ತು ಭಕ್ತಾದಿಗಳಲ್ಲಿ ಭಕ್ತಿ ಭಾವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ
ನಟ್ಟು ಬೊಲ್ಟು ಟೈಟ್ ಮಾಡ್ತೀನಿ ಎಂದಿದ್ದ ಡಿಕೆಶಿ!
ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದ ವೇದಿಕೆ ಮೇಲೆ ಡಿಕೆಶಿ ಗರಂ ಆಗಿದ್ದರು. ಅಸಮಧಾನ ಹೊರ ಹಾಕಿದ್ದರು.ಕನ್ನಡದ ಭಾಷೆ, ನೆಲ, ಜಲ ಅಂತ ಬಂದಾಗ ಸ್ಯಾಂಡಲ್‌ವುಡ್‌ನ ಕಲಾವಿದರು ಬೆಂಬಲಕ್ಕೆ ಬರುವುದಿಲ್ಲ. ಮೇಕೆದಾಟು ಪಾದಯಾತ್ರೆ ಮಾಡುವ ವೇಳೆ ಸಾಧುಕೋಕಿಲಾ ಹಾಗೂ ದುನಿಯಾ ವಿಜಯ್ ಬಿಟ್ಟರೆ ಬೇರೆ ಯಾರೂ ಬಂದಿರಲಿಲ್ಲ. ಈಗ ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದ ಉದ್ಘಾಟನೆಗೂ ತಾರೆಯರು ಬರಲಿಲ್ಲ. ಈ ಕಾರಣಕ್ಕೆ ಡಿಕೆ ಶಿವಕುಮಾರ್ ನೈಟು ಬೋಲ್ಡ್ ಟೈಟ್ ಮಾಡುವುದಕ್ಕೆ ಬರುತ್ತೆ ಎಂದು ಹೇಳಿಕೆ ಕೊಟ್ಟಿದ್ದರು.