ಎ.ಆರ್.ರೆಹಮಾನ್, ಭಾರತೀಯ ಸಂಗೀತ ಲೋಕದ ದಿಗ್ಗಜ. ತಮ್ಮ ಅಮೋಘ ಸಂಗೀತದ ಮೂಲಕವೇ ಕೋಟಿ ಕೋಟಿ ಹೃದಯ ಗೆದ್ದಿರುವ ರೆಹಮಾನ್ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೆಹಲಿ ಹೈಕೋರ್ಟ್ ಕೃತಿಚೌರ್ಯದ ಆರೋಪದಡಿ ರೆಹಮಾನ್ ಹಾಗೂ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾದ ನಿರ್ಮಾಪಕರ ಮೇಲೆ ಎರಡು ಕೋಟಿ ದಂಡ ಹಾಕಿದೆ.
2023ರಲ್ಲಿ ಬಿಡುಗಡೆಯಾಗಿದ್ದ ಪೊನ್ನಿಯಿನ್ ಸೆಲ್ವನ್ 2 ಸಿನಿಮಾದ ‘ವೀರ ರಾಜ ವೀರ’ ಎಂಬ ಹಾಡು ಇದೆ. ಇದು ಜಯಂ ರವಿ ಮತ್ತು ಶೋಭಿತಾ ಧುಲಿಪಾಲ ನಡುವಿನ ಗೀತೆ. ವೀರ ರಾಜ ವೀರ’ ಹಾಡನ್ನು ಶಿವ ಸ್ತುತಿಯಿಂದ ಕದ್ದಿದ್ದು, ಶಿವ ಸ್ತುತಿಯನ್ನು ತಮ್ಮ ತಂದೆ ಮತ್ತು ತಮ್ಮ ಚಿಕ್ಕಪ್ಪನವರು ಕಂಪೋಸ್ ಮಾಡಿದ್ದರು, ಅದರ ರಾಗ, ಸಂಗೀತ, ಬೀಟ್ಗಳನ್ನು ಸಹ ಯಾವುದೇ ಬದಲಾವಣೆ ಇಲ್ಲದೆ ಬಳಸಿಕೊಂಡಿದ್ದಾರೆ’ ಎಂದು ಉಸ್ತಾದ್ ಫಯಾಜ್ ಡಾಗರ್ ಎಂಬುವರು ಹಾಡಿನ ವಿರುದ್ಧ ಕೃತಿಚೌರ್ಯದ ಆರೋಪದ ಮಾಡಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ದೆಹಲಿ ಹೈಕೋರ್ಟ್ ವಿಚಾರಣೆ ನಡೆಸಿ, ಎಆರ್ ರೆಹಮಾನ್ ಅವರಿಗೆ ಎರಡು ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ. ಅದರ ಜೊತೆಗೆ ಕೋರ್ಟ್ ಕಪಾಲದ ಖರ್ಚಿಗೆ ಎರಡು ಲಕ್ಷ ರೂಪಾಯಿಯನ್ನು ಹೆಚ್ಚುವರಿಯಾಗಿ ಡಾಗರ್ ಕುಟುಂಬಕ್ಕೆ ನೀಡಬೇಕು ಎಂದಿದೆ. ಇದರ ಜೊತೆಗೆ ‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾ ಯಾವೆಲ್ಲ ವೇದಿಕೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆಯೋ ಅಲ್ಲೆಲ್ಲ ಮೂಲ ಹಾಡಿನ ಸಂಗೀತ ನಿರ್ದೇಶಕರ ಹೆಸರುಗಳನ್ನು ಸೇರಿಸುವಂತೆ ಹೈಕೋರ್ಟ್ ಆದೇಶ ನೀಡಿದೆ.
ಪೊನ್ನಿಯಿನ್ ಸೆಲ್ವನ್ ಸರಣಿ ಸಿನಿಮಾಗೆ ಮಣಿರತ್ನಂ ಆಕ್ಷನ್ ಕಟ್ ಹೇಳಿದ್ದರು. ಎಆರ್ ರೆಹಮಾನ್ ಸಂಗೀತ ನೀಡಿದ್ದರು. ತ್ರಿಷಾ, ಜಯಂ ರವಿ, ಕಾರ್ತಿ, ಐಶ್ವರ್ಯಾ ರೈ, ವಿಕ್ರಂ ಸೇರಿದಂತೆ ಹಲವರು ನಟಿಸಿದ್ದಾರೆ.