ಧಾರವಾಡ: ಸದ್ಯ ಬಿಸಿಲ ಬೇಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ವೇಳೆ ಜನ ಹೆಚ್ಚಾಗಿ ಮೊರೆ ಹೋಗುವುದು ಕಲ್ಲಂಗಡಿ ಹಣ್ಣಿಗೆ. ಕಲ್ಲಂಗಡಿ ಎಂದಾಕ್ಷಣ ಕೆಂಪು ಬಣ್ಣದ ಕಲ್ಲಂಗಡಿ ನಮ್ಮ ಕಣ್ಣೆದುರು ಬರುತ್ತದೆ. ಆದರೆ, ಇಲ್ಲೋರ್ವ ರೈತ ಹಳದಿ ಬಣ್ಣದ ಕಲ್ಲಂಗಡಿ ಹಣ್ಣನ್ನು ಬೆಳೆದು ಗಮನಸೆಳೆದಿದ್ದಾನೆ.
ಹೌದು! ಹೀಗೆ ನಾಲ್ಕರಿಂದ ಐದು ಕೆಜಿ ತೂಕದ ಕಲ್ಲಂಗಡಿ ಹಣ್ಣನ್ನು ತಮ್ಮ ಕೈಯಲ್ಲಿ ಹಿಡಿದು ತೋರಿಸುತ್ತಿರುವ ಈ ಯುವ ರೈತನ ಹೆಸರು ಮೈಲಾರಪ್ಪ ಗುಡ್ಡಪ್ಪನವರ. ಧಾರವಾಡ ತಾಲೂಕಿನ ಕುರುಬಗಟ್ಟಿ ಗ್ರಾಮದ ರೈತ. ತೋಟಗಾರಿಕಾ ಬೆಳೆ ಬೆಳೆಯುವುದರಲ್ಲಿ ಖುಷಿ ಕಂಡಿರುವ ಇವರು ಇದೀಗ ಹಳದಿ ಬಣ್ಣದ ಕಲ್ಲಂಗಡಿ ಬೆಳೆದು ಬೇಷ್ ಎನಿಸಿಕೊಂಡಿದ್ದಾರೆ.
Chanakya Niti: ಹಣ ಡಬಲ್ ಬೇಕಿದ್ದರೆ ಈ ತಪ್ಪುಗಳನ್ನು ಮಾಡಬೇಡಿ ಎನ್ನುತ್ತಾನೆ ಚಾಣಕ್ಯ..!
ಸಹಜವಾಗಿಯೇ ಕಲ್ಲಂಗಡಿ ಹಣ್ಣು ಕಟ್ ಮಾಡಿದಾಗ ಕೆಂಪು ಬಣ್ಣವಿರುತ್ತದೆ. ಇವರು ಬೆಳೆದ ಕಲ್ಲಂಗಡಿ ಹಣ್ಣನ್ನು ಕಟ್ ಮಾಡಿದರೆ ಅದು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ. ಏಕೆಂದರೆ ಇದು ಹಳ್ಳದಿ ಬಣ್ಣದ ಕಲ್ಲಂಗಡಿ. ಆವಿಷ್ಕರಿಸಿದ ತಳಿಯ ಕಲ್ಲಂಗಡಿ ಬೀಜಗಳನ್ನು ತೋಟಗಾರಿಕಾ ಇಲಾಖೆ ಅಧಿಕಾರಿಗಳಿಂದ ಪಡೆದು ತಮ್ಮ ಹೊಲದಲ್ಲಿ ಬೆಳೆದ ಮೈಲಾರಪ್ಪ ಇದೀಗ ಹಳದಿ ಬಣ್ಣದ ಕಲ್ಲಂಗಡಿಯ ಉತ್ತಮ ಫಸಲು ಪಡೆದಿದ್ದಾರೆ. ಇದರ ಜೊತೆಗೆ ಕೆಂಪು ಕಲ್ಲಂಗಡಿಯನ್ನೂ ಮೈಲಾರಪ್ಪ ಬೆಳೆದಿದ್ದಾರೆ. ಒಂದು ಎಕರೆಗೆ ಅಂದಾಜು ಒಂದು ಲಕ್ಷದಷ್ಟು ಖರ್ಚು ಮಾಡಿದರೆ ಈ ಹಣ್ಣಿನಿಂದ ಸುಮಾರು ಮೂರೂವರೆ ಲಕ್ಷ ಆದಾಯ ಗಳಿಸಬಹುದು ಎನ್ನುತ್ತಾರೆ ಮೈಲಾರಪ್ಪ.
ಒಂದು ಎಕರೆ ಕೃಷಿ ಜಮೀನಿನಲ್ಲಿ ಈ ಹಳದಿ ಬಣ್ಣದ ಕಲ್ಲಂಗಡಿಯನ್ನು ಈ ರೈತ ಬೆಳೆದಿದ್ದಾನೆ. ಕುರುಬಗಟ್ಟಿ ಹೊರತುಪಡಿಸಿದರೆ ಧಾರವಾಡ ತಾಲೂಕಿನ ಬಾಡ ಗ್ರಾಮದಲ್ಲೂ ಓರ್ವ ರೈತ ಈ ಹಳದಿ ಬಣ್ಣದ ಕಲ್ಲಂಗಡಿ ಬೆಳೆದಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಇಬ್ಬರು ರೈತರು ಈ ವಿನೂತನ ಕಲ್ಲಂಗಡಿ ಹಣ್ಣನ್ನು ಬೆಳೆದಿದ್ದಾರೆ. ರೈತರ ಈ ವಿಶೇಷ ಪ್ರಯತ್ನಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕುರುಬಗಟ್ಟಿ ಗ್ರಾಮದ ಮೈಲಾರಪ್ಪ ಅವರ ಜಮೀನಿಗೆ ಭೇಟಿ ನೀಡಿ ಹಳದಿ ಬಣ್ಣದ ಕಲ್ಲಂಗಡಿ ನೋಡಿ ಅವರು ಕೂಡ ಆಶ್ಚರ್ಯಗೊಂಡರು. ಅಲ್ಲದೇ ಆ ಹಣ್ಣಿನ ರುಚಿ ಕೂಡ ಸವಿದರು.
ಕಡಿಮೆ ಖರ್ಚಿನ ಮೂಲಕ ಒಂದು ಎಕರೆಯಲ್ಲಿ ಈ ಕಲ್ಲಂಗಡಿ ಬೆಳೆದಿರುವ ಈ ರೈತ ಸುಮಾರು 10-15 ಟನ್ ಕಲ್ಲಂಗಡಿ ಫಸಲು ಪಡೆದಿದ್ದಾರೆ. ಸದ್ಯಕ್ಕಂತೂ ಈ ಹಣ್ಣಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದು, ಇದರಿಂದ ಲಕ್ಷ ಲಕ್ಷ ಆದಾಯದ ನೀರಿಕ್ಷೆಯಲ್ಲಿದ್ದಾರೆ ರೈತ ಮೈಲಾರಪ್ಪ. ಬೇರೆ ಬೇರೆ ದೇಶದ ರೈತರು ರೀತಿಯ ಪ್ರಯತ್ನಕ್ಕೆ ಕೈ ಹಾಕಿದ್ದನ್ನು ನಾವು ನೋಡಿದ್ದೇವೆ. ಆದರೆ, ಇದೀಗ ಧಾರವಾಡದ ರೈತರೇ ಈ ರೀತಿ ಪ್ರಯತ್ನ ಮಾಡಿ ಅದರಲ್ಲಿ ಯಶಸ್ಸು ಕಂಡಿದ್ದಾರೆ.