ಕನ್ನಡ ನಟಿ ಲಾಸ್ಯ ನಾಗರಾಜ್ ಕೌಟುಂಬಿಕ ಕಲಹವೀಗ ಬೀದಿಗೆ ಬಿದ್ದಿದೆ. ಲಾಸ್ಯ ತಾಯಿ ಡಾ.ಸುಧಾ ನಾಗರಾಜ್ ಅವರ ಮೇಲೆ ಅವರ ಸ್ವತಃ ತಂಗಿ ಮಂಗಳ ಶಶಿಧರ್ ಮತ್ತು ಅವರ ಪತಿ ಶಶಿಧರ್ ದೈಹಿಕ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಬೆಂಗಳೂರಿನ ಬಸವೇಶ್ವರನಗರದ ನಿವಾಸದಲ್ಲಿ ಈ ಘಟನೆ ನಡೆದಿದ್ದು, ಒಂದೇ ಕಟ್ಟಡದ ಎರಡು ಮಹಡಿಗಳಲ್ಲಿ ಅಕ್ಕ-ತಂಗಿಯ ಕುಟುಂಬದವರು ವಾಸ ಮಾಡುತ್ತಿದ್ದಾರೆ. ಮೊದಲ ಮಹಡಿ ಮನೆಯಲ್ಲಿ ನಟಿ ಲಾಸ್ಯ ಮತ್ತು ತಾಯಿ ವಾಸವಾಗಿದ್ದಾರೆ. ಸುಧಾ ನಾಗರಾಜ್ ಮೂಲತಃ ಕ್ಲಾಸಿಕಲ್ ಡ್ಯಾನ್ಸರ್ ಆಗಿದ್ದು ಗ್ರೌಂಡ್ ಫ್ಲೋರ್ನ ಪಾರ್ಕಿಂಗ್ ಜಾಗದಲ್ಲಿ ಹಲವು ವರ್ಷಗಳಿಂದ ಡ್ಯಾನ್ಸ್ ಕ್ಲಾಸ್ ನಡೆಸುತ್ತಿದ್ದಾರೆ. ಇದೇ ವಿಚಾರಕ್ಕೆ ಪದೇ ಪದೇ ಕಿರಿಕ್ ಮಾಡುತ್ತಿದ್ದ ತಂಗಿ ಮಂಗಳ, ನಿನ್ನೆ ಪತಿಯ ಜೊತೆ ಸೇರಿ ಅಕ್ಕ ಸುಧಾ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಕೆನಾಡದಲ್ಲಿದ್ದ ಲಾಸ್ಯ ವಿಷಯ ತಿಳಿದು ಭಾರತಕ್ಕೆ ವಾಪಸ್ ಆಗುತ್ತಿದ್ದಾರೆ. ನಿನ್ನೆ ರಾತ್ರಿ ಮನೆಯ ಮುಂದಿನ ಜಾಗದ ವಿಚಾರವಾಗಿ ತಂಗಿ ಹಾಗೂ ತಂಗಿಯ ಗಂಡ ಸೇರಿಕೊಂಡು ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಘಟನೆಯ ನಂತರ ಸುಧಾ ನಾಗರಾಜ್ ಅವರು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದು, ಚೇತರಿಕೆ ನಂತರ ಹಲ್ಲೆಯಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಘಟನೆ ಸಂಬಂಧಿಸಿದಂತೆ ಸಿಸಿಟಿವಿ ವಿಡಿಯೋವನ್ನೂ ಲಾಸ್ಯ ಹಂಚಿಕೊಂಡಿದ್ದಾರೆ. ಆದರೆ ಇದುವರೆಗೂ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.