ಸಾಮಾನ್ಯವಾಗಿ ಮನೆಯಾಗಲಿ ಅಥವಾ ಕಚೇರಿಯಾಗಲಿ ನಾವು ಪ್ರತಿದಿನ ಶೌಚಾಲಯವನ್ನು ಬಳಸಿಯೇ ಬಳಸುತ್ತೇವೆ. ನಮ್ಮ ದೈನಂದಿನ ಜೀವನದಲ್ಲಿ ಶೌಚಾಲಯ ಕೂಡ ಬಹುಮುಖ್ಯ ಪಾತ್ರವನ್ನು ಹೊಂದಿದೆ. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಇತ್ತೀಚಿನ ದಿನಗಳಲ್ಲಿ ಹೊಸ ಬಗೆಯ ಕಮಾಡ್ಗಳು ಮಾರುಕಟ್ಟೆಗೆ ಬಂದಿದ್ದು, ಇದರಲ್ಲಿ ಆಧುನಿಕ ಫಿನಿಶಿಂಗ್ ಜತೆಗೆ ಹಲವು ಪರಿಕರಗಳಿವೆ.
ಹಿಂದಿನ ಕಾಲದಲ್ಲಿ ಶೌಚಾಲಯವಿಲ್ಲದೇ ಒದ್ದಾಡುತ್ತಿದ್ದ ಜನರು ಈಗ ತಮ್ಮ ಮನೆಗಳಲ್ಲಿ ಎರಡೆರಡು ಶೌಚಾಲಯಗಳನ್ನು ನಿರ್ಮಿಸಿದ್ದಾರೆ. ಅದರಲ್ಲೂ ಈಗಂತೂ ಪಾಶ್ಚಿಮಾತ್ಯ ಶೌಚಾಲಯಗಳನ್ನು ಜನರು ಹೆಚ್ಚಾಗಿ ಬಳಸಲು ಶುರು ಮಾಡಿದ್ದಾರೆ. ಏಕೆಂದರೆ ಇದರಿಂದ ಅನೇಕ ಸೌಲಭ್ಯಗಳಿವೆ. ದಿನದಲ್ಲಿ ಅನೇಕ ಬಾರಿ ಎಲ್ಲರೂ ಶೌಚಾಲಯ ಬಳಸುತ್ತೇವೆ. ಆದರೆ ಎಂದಾದರೂ ಪಾಶ್ಚಿಮಾತ್ಯ ಶೌಚಾಲಯದ ಫ್ಲಶ್ ನಲ್ಲಿ ಎರಡು ಬಟನ್ಗಳು ಏಕಿದೆ ಅಂತ ಯೋಚಿಸಿದ್ದೀರಾ?
ಹೌದು, ನೋಡಲು ವಿಭಿನ್ನವಾಗಿರುವ ಫ್ಲಶ್ ಬಟನ್ನಲ್ಲಿ ಒಂದು ಚಿಕ್ಕದಾದ ಬಟನ್ ಇದ್ದರೆ, ಮತ್ತೊಂದರಲ್ಲಿ ದೊಡ್ಡ ಬಟನ್ ಇದೆ. ಇವೆರಡನ್ನೂ ಒತ್ತುವುದರಿಂದ ನೀರು ಬಿಡುಗಡೆಯಾಗುತ್ತದೆ. ಸದ್ಯ ಈಗಿರುವ ಪ್ರಶ್ನೆ ಏನೆಂದರೆ, ಎರಡೂ ಗುಂಡಿಗಳನ್ನು ಒತ್ತಿದರೂ ಸಹ ನೀರು ಬರುತ್ತದೆ ನಿಜ. ಹೀಗಿರುವಾಗ ಫ್ಲಶ್‌ನಲ್ಲಿ ಎರಡು ಗುಂಡಿಗಳು ಏಕೆ ಇರುತ್ತವೆ? ಇವುಗಳ ಅರ್ಥವೇನು ಮತ್ತು ಇವುಗಳನ್ನು ಯಾವಾಗ ಬಳಸಬೇಕು ಎಂಬ ಈ ಎಲ್ಲಾ ವಿಚಾರಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಟಾಯ್ಲೆಟ್ ಫ್ಲಶ್‌ನಲ್ಲಿ ಎರಡು ಗುಂಡಿಗಳಿವೆ. ನೀವು ಸಣ್ಣ ಫ್ಲಶ್ ಬಟನ್ ಒತ್ತಿದಾಗ, ಶೌಚಾಲಯವನ್ನು ಸ್ವಚ್ಛಗೊಳಿಸಲು ಸುಮಾರು 3 ಲೀಟರ್ ನೀರು ಬರುತ್ತದೆ. ಅದೇ ರೀತಿ ನೀವು ದೊಡ್ಡ ಬಟನ್ ಒತ್ತಿದಾಗ ಸುಮಾರು 6 ಲೀಟರ್ ನೀರು ಬರುತ್ತದೆ. ಒಟ್ಟಾರೆ ಈ ಎರಡೂ ಗುಂಡಿಗಳನ್ನು ಕಡಿಮೆ ಮತ್ತು ಹೆಚ್ಚು ನೀರನ್ನು ಬಿಡುಗಡೆ ಮಾಡಲು ಬಳಸಲಾಗುತ್ತದೆ. ಸಾಮಾನ್ಯವಾಗಿ, ಮೂತ್ರ ವಿಸರ್ಜನೆಯ ನಂತರ ಜನರು ಚಿಕ್ಕ ಬಟನ್ ಒತ್ತಬೇಕು. ಇದರಿಂದ ನೀರು ಕಡಿಮೆ ಬಿಡುಗಡೆಯಾಗುತ್ತದೆ. ಮಲವಿಸರ್ಜನೆಯ ನಂತರ ಹೆಚ್ಚು ನೀರು ಹೊರ ಬರಲು ಮತ್ತು ಶೌಚಾಲಯವನ್ನು ಸ್ವಚ್ಛಗೊಳಿಸಲು ಸಾಧ್ಯವಾದಷ್ಟು ದೊಡ್ಡ ಬಟನ್ ಒತ್ತಬೇಕು. ಒಂದು ವೇಳೆ ಎರಡೂ ಗುಂಡಿಗಳನ್ನು ಒತ್ತಿದಾಗ, ವಿಭಿನ್ನ ಪ್ರಮಾಣದ ನೀರು ಹೊರಬರುತ್ತದೆ.
ವಾಸ್ತವವಾಗಿ ಇಂದಿನ ಕಾಲದಲ್ಲಿ ನೀರಿನ ಕೊರತೆಯು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಡ್ಯುಯಲ್ ಫ್ಲಶ್ ವ್ಯವಸ್ಥೆಯು ತುಂಬಾ ಉಪಯುಕ್ತವಾಗಿದೆ. ಇದು ಪ್ರತಿ ಬಾರಿ 3 ರಿಂದ 6 ಲೀಟರ್ ನೀರನ್ನು ಉಳಿಸಬಹುದು. ನೀವು ದಿನವಿಡೀ ಹಲವಾರು ಬಾರಿ ಶೌಚಾಲಯವನ್ನು ಬಳಸಿದರೆ ಮತ್ತು ಸರಿಯಾದ ಬಟನ್ ಒತ್ತಿದರೆ, ಪ್ರತಿ ತಿಂಗಳು ನೂರಾರು ಲೀಟರ್ ನೀರನ್ನು ಉಳಿಸಬಹುದು.
ಡ್ಯುಯಲ್ ಫ್ಲಶ್ ವ್ಯವಸ್ಥೆಯು ನಿಮ್ಮ ಮನೆಯಲ್ಲಿ ನೀರನ್ನು ಉಳಿಸುವಲ್ಲಿ ಸಹಾಯ ಮಾಡುವುದಲ್ಲದೇ, ವಾತಾವರಣವನ್ನು ಕಾಪಾಡುವಲ್ಲಯೂ ಸಹಾಯ ಮಾಡುತ್ತದೆ