ಬೆಂಗಳೂರಿನಲ್ಲಿ ಸೈಟ್ ಖರೀದಿ ಮಾಡಲು ನೀವು ಪ್ಲ್ಯಾನ್ ಮಾಡುತ್ತಿದ್ದೀರಾ? ಹಾಗಾದರೆ ನೀವು ಓದಲೇಬೇಕಾದ ಸುದ್ದಿಯೊಂದು ಇಲ್ಲಿದೆ. ರಾಜಧಾನಿ ಬೆಂಗಳೂರು ಜನರಿಗೆ ಮನೆ, ಸೈಟ್ ಖರೀದಿ ಮಾಡಬೇಕು ಎಂಬ ಕನಸು ಇದ್ದೇ ಇರುತ್ತದೆ. ಆ ಕನಸನ್ನು ನೀವು ಈಡೇರಿಸಿಕೊಳ್ಳಬೇಕಾ?
ಹೌದು, ಬೆಂಗಳೂರಿನಲ್ಲಿ ನಿವೇಶನಗಳ ಬೆಲೆ ಗಗನಕ್ಕೇರಿರುವ ಈ ಸಂದರ್ಭದಲ್ಲಿ ಖಾಸಗಿ ಸೈಟ್ಗಳನ್ನು ಕೊಂಡುಕೊಳ್ಳುವುದು ಸುಲಭವೂ ಅಲ್ಲ, ದಾಖಲೆ ಇನ್ನಿತರ ವಿಚಾರಗಳ ದೃಷ್ಟಿಯಿಂದ ಅಷ್ಟು ಸರಳವೂ ಅಲ್ಲ. ಹಾಗಾದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿರುವ ಸೈಟ್ಗಳನ್ನು ಕೊಂಡುಕೊಳ್ಳಬೇಕಾದರೆ? ಅರ್ಹತೆ ಏನು? ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ? ಏನೆಲ್ಲ ದಾಖಲೆಗಳು ಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆ ಕುರಿತ ಸಂದೇಹಗಳನ್ನು ನಿವಾರಿಸಲು ಇಲ್ಲಿ ಪ್ರಯತ್ನಿಸಲಾಗಿದೆ.
ಬಿಡಿಎ ನಿವೇಶನದ ಮರು ಮಾರಾಟ ಅಥವಾ ರೀಸೆಲ್ ವೇಳೆ ಯಾರು ಬೇಕಾದರೂ ಕೊಂಡುಕೊಳ್ಳಬಹುದು. ಆದರೆ ಹರಾಜು ಪ್ರಕ್ರಿಯೆ ಮೂಲಕ ಮಾರಾಟ ಮಾಡಲಾಗುವ ಬಿಡಿಎ ಸೈಟ್ ಅನ್ನು ಭಾರತೀಯ ನಾಗರಿಕ ಮಾತ್ರ ಖರೀದಿಸಬಹುದಾಗಿದೆ. ಒಂದು ವೇಳೆ, ಅನಿವಾಸಿ ಭಾರತೀಯರು ಬಿಡಿಎ ಸೈಟ್ ಖರೀದಿಸಬೇಕು ಎಂದಿದ್ದಲ್ಲಿ ಸರ್ಕಾರದಿಂದ ಅನುಮತಿ ಪಡೆದಿರಬೇಕು. ಬೇರೊಬ್ಬ ಮಾಲೀಕನಿಂದ ಖರೀದಿಸುವುದಾದರೆ ಯಾರು ಬೇಕಾದರೂ ಖರೀದಿ ಮಾಡಬಹುದು.
ಹೊಸದಾಗಿ ಬಿಡಿಎ ಸೈಟ್ ಖರೀದಿ ಮಾಡಬೇಕಾದರೆ ಅಂಥವರು ಕರ್ನಾಟಕದಲ್ಲಿ ವಾಸವಾಗಿರಬೇಕು. ಅವರ ಉದ್ಯೋಗ ಏನು ಎಂಬುದನ್ನು ಅರ್ಜಿಯಲ್ಲಿ ನಮೂದಿಸಬೇಕಾಗುತ್ತದೆ. ಈಗಾಗಲೇ ಎಷ್ಟು ಆಸ್ತಿ ಇದೆ ಎಂಬ ವಿವರ ನೀಡಬೇಕಾಗುತ್ತದೆ. ಬಿಡಿಎ ಸೈಟು ಮಾರಾಟದ ವಿಚಾರದಲ್ಲಿ ಹಲವು ಕೆಟಗರಿಗಳನ್ನು ಮಾಡಲಾಗಿದೆ. ಬಿಪಿಎಲ್, ಎಪಿಎಲ್, ಜನರಲ್ ಇತ್ಯಾದಿಯಾಗಿ ವರ್ಗೀಕರಣ ಮಾಡಲಾಗಿದೆ. ಬಿಡಿಎ ವೆಬ್ಸೈಟ್ಗಳಲ್ಲಿ ಮತ್ತು ಕಚೇರಿಯಲ್ಲಿ ಕೂಡ ಈ ಬಗ್ಗೆ ಮಾಹಿತಿ ಪಡೆಯಬಹುದು.
ನಿವೇಶನ ಖರೀದಿಗೆ ಅರ್ಜಿ ಸಲ್ಲಿಸಿದ ಬಳಿಕ ಅಂಚೆಯ ಮೂಲಕವೇ ಬಿಡಿಎ ಸಂವಹನ ನಡೆಸುತ್ತದೆ. ಎರಡು ಬಾರಿ, ಮೂರು ಬಾರಿ ಅರ್ಜಿ ಸಲ್ಲಿಸಲು ಅವಕಾಶಗಳಿವೆ. ಬಹಳ ಸುಲಭದಲ್ಲಿ ಬಿಡಿಎ ಸೈಟು ದೊರೆಯುವುದಿಲ್ಲ. ಹಿರಿಯ ನಾಗರಿಕರ ವರ್ಗದಲ್ಲಿ ಬರುವವರಿಗೆ ಸ್ವಲ್ಪ ಬೇಗನೆ ಸೈಟ್ ಹಂಚಿಕೆಯಾಗುವ ಸಾಧ್ಯತೆ ಇದೆ.
ಬಿಡಿಎ ಸೈಟ್ ಹರಾಜು ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಬಿಡಿಎ ಸೈಟ್ ಹರಾಜು ಪ್ರಕ್ರಿಯೆ ಸಾಮಾನ್ಯವಾಗಿ ಪ್ರತಿ ವರ್ಷ ನಡೆಯುತ್ತದೆ. ಕೆಲವು ಸೈಟ್ಗಳನ್ನು ಮೂಲೆನಿವೇಶನ ಅಥವಾ ಕಾರ್ನರ್ ಪ್ರಾಪರ್ಟಿ ಎಂದು ಕರೆಯಲಾಗುತ್ತದೆ. ಇವುಗಳನ್ನು ಮೊದಲು ಹರಾಜು ಹಾಕುತ್ತಾರೆ. ಕಮರ್ಷಿಯಲ್ ಸ್ಪೇಸ್ ಎಂದು ಮತ್ತೊಂದು ವಿಭಾಗ ಇರುತ್ತದೆ. ಅದನ್ನು ಕೂಡ ಹರಾಜು ಮೂಲಕ ಮಾರಾಟ ಮಾಡಲಾಗುತ್ತದೆ. ಇದರಿಂದ ಬಿಡಿಎಗೆ ಹೆಚ್ಚು ಆದಾಯ ದೊರೆಯುತ್ತದೆ.
ಬಿಡಿಎ ಸೈಟ್ ಹರಾಜಿನ ಹಂತಗಳು
ಮೊದಲು ಬಿಡಿಎ ಅಧಿಸೂಚನೆ ಹೊರಡಿಸುತ್ತದೆ.
ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗುತ್ತದೆ.
ಬಿಡಿಎ ವೆಬ್ಸೈಟ್ನಲ್ಲಿ ಕೂಡ ಪ್ರಕಟಣೆ ಹೊರಡಿಸುತ್ತಾರೆ.
ಎಲ್ಲಿ ನಿವೇಶನ ಇದೆ ಎಂಬ ಬಗ್ಗೆ ಗೂಗಲ್ ಮ್ಯಾಪ್ನಲ್ಲಿ ಮಾಹಿತಿ ನೀಡುತ್ತಾರೆ.
ನಿವೇಶನ ಖರೀದಿಸುವ ಇಚ್ಛೆ ಉಳ್ಳವರು ಆ ಜಾಗಕ್ಕೆ ಹೋಗಿ ಪರಿಶೀಲಿಸಬೇಕಾಗುತ್ತದೆ.
ಆಯ್ಕೆ ಮಾಡಿದ ನಿವೇಶನದ ಮೇಲೆ ಮೂಲ ಬೆಲೆ (ಬೇಸಿಕ್ ರೇಟ್) ನಿಗದಿ ಮಾಡುತ್ತಾರೆ.
ಆ ಮೂಲ ಬೆಲೆಗಿಂತ ಹೆಚ್ಚು ದರಕ್ಕೆ ಬಿಡ್ ಮಾಡಿ ನಿವೇಶನ ಖರೀದಿಸಬಹುದು.
ಬಿಡಿಎ ಸೈಟ್ ಖರೀದಿಗೆ ಯಾವೆಲ್ಲ ದಾಖಲೆಗಳು ಬೇಕು?
ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ಬ್ಯಾಂಕ್ ಖಾತೆ ವಿವರಗಳು
ವಿಳಾಸ, ಈ ಪ್ರೊಕ್ಯೂರ್ಮೆಂಟ್ ಐಡಿ.
ಬಿಡಿಎ ಒಂದಿಷ್ಟು ಜಾಗವನ್ನು ಖರೀದಿಸಿ ಅಭಿವೃದ್ಧಿಪಡಿಸುತ್ತದೆ. ನಿವೇಶನಗಳನ್ನಾಗಿ ಪರಿವರ್ತಿಸಿ ಬಿಬಿಎಂಪಿಗೆ ಹಸ್ತಾಂತರಿಸುತ್ತದೆ. ಇಲ್ಲಿ ಬಿಡಿಎ ಹಾಗೂ ಬಿಬಿಎಂಪಿ ನಿಯಮಗಳು ಈ ಸೈಟ್ಗಳಿಗೆ ಅನ್ವಯವಾಗುತ್ತವೆ. ನಿವೇಶನ ಖರೀದಿಸಿದ ನಂತರ ಖಾತಾ ಮಾಡಿಸಿಕೊಳ್ಳುವುದು ಬಹು ಮುಖ್ಯವಾಗಿದೆ. ಇವಾಗ ಇ ಖಾತಾ ಕಡ್ಡಾಯಗೊಳಿಸಿರುವುದು ಗಮನಾರ್ಹ.
ನಿವೇಶನದ ಉದ್ದೇಶಕ್ಕೆಂದು ಖರೀದಿಸಿದ ಸೈಟ್ ಅನ್ನು ವಾಣಿಜ್ಯಕ್ಕೆ ಪರಿವರ್ತಿಸಲು ಅವಕಾಶವೂ ಇದೆ. ತೆರಿಗೆ ಆಯ್ಕೆಯ ವೇಳೆ ಅದನ್ನು ಮಾಡಬೇಕಾಗುತ್ತದೆ.