ದುನಿಯಾ ವಿಜಯ್ ಕುಮಾರ್ ತಾವೊಬ್ಬ ಅದ್ಭುತ ಸಿನಿಮಾಕರ್ಮಿ ಅನ್ನೋದನ್ನು ಸಲಗ, ಭೀಮ ಮೂಲಕ ಪ್ರೋವ್ ಮಾಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿರುವ ಬ್ಲಾಕ್ ಕೋಬ್ರಾ ಹ್ಯಾಟ್ರಿಕ್ ಬಾರಿಸುವ ಹುಮ್ಮಸ್ಸಿನಲ್ಲಿದ್ದಾರೆ. ಒಂದ್ಕಡೆ ನಟನೆ ಮತ್ತೊಂದ್ಕಡೆ ನಿರ್ದೇಶನ..ಇವರೆಡರ ಜೊತೆಯಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಸ್ಯಾಂಡಲ್ ವುಡ್ ಸಿನಿಮಾಪ್ರೇಮಿಗಳ ಮುಂದೆ ತರುವ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ಲ್ಯಾಂಡ್ ಲಾರ್ಡ್ ಚಿತ್ರದಲ್ಲಿ ಅಭಿನಯಿಸುತ್ತಿರುವ ಸ್ಯಾಂಡಲ್ ವುಡ್ ಸಿಂಗಲ್ ಸಲಗ ʼಸಿಟಿ ಲೈಟ್ಸ್ʼ ಎಂಬ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಮೂಲಕವೇ ವಿಜಯ್ ಎರಡನೇ ಪುತ್ರಿ ಮೋನಿಷಾ ನಾಯಕಿಯಾಗಿ ಮೆರವಣಿಗೆ ಹೊರಡುತ್ತಿದ್ದಾರೆ. ಅದು ಕೂಡ ದೊಡ್ಮನೆ ಹುಡ್ಗ ವಿನಯ್ ರಾಜ್ ಕುಮಾರ್ ಗೆ ಜೋಡಿಯಾಗಿ ಅನ್ನೋದು ವಿಶೇಷ.
ಕಳೆದ ತಿಂಗಳಷ್ಟೇ ಸಿಟಿ ಲೈಟ್ಸ್ ಸಿನಿಮಾ ಅದ್ಧೂರಿಯಾಗಿ ಸೆಟ್ಟೇರಿತ್ತು. ಬೆಂಗಳೂರಿನ ಬಂಡೇ ಮಹಾಕಾಳಿ ದೇವಿ ಆಶೀರ್ವಾದ ಪಡೆದು ಶೂಟಿಂಗ್ ಅಖಾಡಕ್ಕೆ ತಂಡ ಕಟ್ಟಿಕೊಂಡು ಇಳಿದಿದ್ದ ದುನಿಯ್ ವಿಜಯ್ ಕುಮಾರ್ ಈಗ ಪ್ರೇಕ್ಷಕರಿಗೆ ಸ್ಪೆಷಲ್ ಆಗಿ ಕುಕ್ಕಿಂಗ್ ಮಾಡ್ತಿದ್ದಾರೆ ಅನ್ನೋದು ಗೊತ್ತಾಗುತ್ತಿದೆ. ಭೀಮ, ಸಲಗದಲ್ಲಿ ಹೊಸ ಬಗೆಯ ಪ್ರಯತ್ನ-ಪ್ರಯೋಗಳನ್ನು ಮಾಡಿ ಗೆದ್ದಿರುವ ವಿಜಯ್ ಅದೇ ಫಾರ್ಮೂಲಾ ಸಿಟಿ ಲೈಟ್ಸ್ ಗೆ ಅಪ್ಲೈ ಮಾಡುತ್ತಿದ್ದಾರೆ. ಅದರಲ್ಲಿಯೂ ಭೀಮ, ಸಲಗ ಅಂಗಳದ ಹಾಡುಗಳಿಗೆ ಜನ ನಿಂತಲ್ಲೇ ಎದ್ದು ಕುಣಿದಿದ್ದು ಕಣ್ಮುಂದೆಯೇ ಇದೆ. ವಿಭಿನ್ನ ಬಗೆಯ ಗೀತೆಗಳನ್ನಿಟ್ಟು ಜೈಯಿಸಿದ್ದ ದುನಿಯಾ ಈಗ ಸಿಟಿ ಲೈಟ್ಸ್ ನಲ್ಲಿಯೂ ವಿಶೇಷ ಹಾಡನ್ನು ರೆಡಿ ಮಾಡುತ್ತಿದ್ದಾರೆ.
ಭೀಮ ಸಿನಿಮಾದಲ್ಲಿ ಬ್ಯಾಡ್ ಬಾಯ್ಸ್ ಅಂತಾ ಬೊಂಬಾಟ್ ಆದ ಹಾಡು ಮಾಡಿದ್ದ ಎಂಸಿ ಬಿಜ್ಜು ಮತ್ತೊಮ್ಮೆ ಸಿಟಿ ಲೈಟ್ಸ್ ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಸಿಟಿ ಲೈಟ್ಸ್ ನಲ್ಲೊಂದು ರ್ಯಾಪ್ ಹಾಡು ಇರಬಹುದಾ? ಮೇ ಬಿ.. ಕೈಯಲ್ಲಿ ಶಂಖ, ತಮಟೆ ಹಿಡಿದು ವಿಜಯ್ ಕುಮಾರ್ ಹಾಗೂ ಸಂಗೀತ ನಿರ್ದೇಶಕ ಚರಣ್ ರಾಜ್ ಕುಳಿತಿದ್ದಾರೆ. ಇದನ್ನು ನೋಡ್ತಿದ್ರೆ ಪಕ್ಕ ಸ್ಪೆಷಲ್ ಹಾಡು ಪ್ರೇಕ್ಷಕ ಪ್ರಭುವಿಗೆ ರೆಡಿಯಾಗ್ತಿದೆ. ಚರಣ್ ಟ್ಯೂನ್ ಅಂದ್ಮೇಲೆ ನಿರೀಕ್ಷೆ ಕೇಳುವ ಹಾಗೆಯೇ ಇಲ್ಲ ಬಿಡಿ.
ಸಿಟಿ ಲೈಟ್ಸ್ ಸಿನಿಮಾಗೆ ದುನಿಯಾ ವಿಜಯ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದು, ವಿನಯ್ ರಾಜ್ ಕುಮಾರ್ ಹಾಗೂ ಮೋನಿಷಾ ನಾಯಕ ನಾಯಕಿಯಾಗಿ ಸಾಥ್ ಕೊಡುತ್ತಿದ್ದಾರೆ. ‘ಜವಾಬ್ ದಾರಿ ದೀಪಗಳು’ ಎಂಬ ಟ್ಯಾಗ್ಲೈನ್ ಈ ಸಿನಿಮಾದ ಶೀರ್ಷಿಕೆಗೆ ಇದೆ. ಈ ಸಿನಿಮಾ ಮೂಲಕ ವಿನಯ್ ರಾಜ್ಕುಮಾರ್ ಅವರು ಹೊಸ ಬಗೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.