ಹುಬ್ಬಳ್ಳಿ: ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ವೇತುವೆ ಕಾಮಗಾರಿಗೆ ಚನ್ನಮ್ಮ ವೃತ್ತದ ಬಳಿಯಿರುವ ಈದ್ಗಾ ಮೈದಾನದ ಆವರಣದ ಗೋಡೆ ಭಾಗಶಃ ಭಾಗ ತೆರವು ಮಾಡಲಾಗಿದೆ.
ಸ್ವಾಧೀನ ಪ್ರಕ್ರಿಯೆ ಕಾಮಗಾರಿ ಶುಕ್ರವಾರದಿಂದ ರಾತ್ರಿ ಆರಂಭವಾಗಿತ್ತು ಶನಿವಾರ ಬೆಳಗಿನ ಜಾವದವರೆಗೆ ಪೂರ್ಣಗೊಳಿಸಿದ್ದಾರೆ .
ಮೈದಾನದ ಮಧ್ಯ ಭಾಗದಲ್ಲಿರುವ ಈದ್ದಾ ಕಟ್ಟಡದ ರಕ್ಷಣೆಗೆ, ತಡೆಗೋಡೆಯ ಸಮೀಪದ ಸುಮಾರು 10-20 ಮೀಟರ್ ಅಂತರದಲ್ಲಿ ತಗಡಿನ ಶೀಟ್ ಅಳವಡಿಸಲಾಗಿದೆ. ಚನ್ನಮ್ಮ ವೃತ್ತದಿಂದ ಕೋರ್ಟ್ ವೃತ್ತಕ್ಕೆ ತೆರಳುವಲ್ಲಿನ ಕಬ್ಬಿಣದ ತಡೆಗೋಡೆಯನ್ನು ಗ್ಯಾಸ್ ಕಟರ್ನಿಂದ ತುಂಡು ಮಾಡಿ ತೆರವು ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕಾಮಗಾರಿ ಗುತ್ತಿಗೆ ಪಡೆದ ಝಂಡು ಕಂಪನಿಯ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ತೆರವು ಕಾರ್ಯಕ್ಕೆ ಅನುಮತಿ ಹಾಗೂ ಭದ್ರತೆ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಹಾನಗರ ಪಾಲಿಕೆಗೆ ಹಾಗೂ ಪೊಲೀಸ್ ಇಲಾಖೆಗೆ 2024ರ ಜುಲೈ 23 ರಂದೇ ಪತ್ರ ಬರೆದು ತಿಳಿಸಿದ್ದರು.
ಯೋಜನೆ ಪ್ರಕಾರ ಚನ್ನಮ್ಮ ವೃತ್ತದಿಂದ ಕೋರ್ಟ್ ವೃತ್ತದ ಕಡೆಗೆ ಹಾಗೂ ಚನ್ನಮ್ಮ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ತೆರಳುವ ಈದ್ಗಾ ಮೈದಾನದ ಅಕ್ಕಪಕ್ಕ ಶೇ 10-15ರಷ್ಟು ಭಾಗ ತೆರವು ಆಗಲಿದೆ. ಮೇಲೇತುವೆಗೆ ಕಾಮತ್ ಹೋಟೆಲ್ ಎದುರು ಬೃಹತ್ ಪಿಲ್ಲರ್ಗಳು, ಸಂಗೊಳ್ಳಿ ರಾಯಣ್ಣ ವೃತ್ತದ ಹೈಮಾಸ್ಟ್ ಕಂಬದ ಬಳಿ ಒಂದು ಪಿಲ್ಲರ್ ನಿರ್ಮಾಣವಾಗಲಿದೆ. ಈ ಕಾಮಗಾರಿಗೆ ಉಪನಗರ ಪೊಲೀಸ್ ಠಾಣೆ ಕಟ್ಟಡದ ಶೇ 20ರಷ್ಟು ಭಾಗವೂ ತೆರವು ಆಗಲಿದೆ.
ಈದ್ಗಾ ಮೈದಾನದ ಬಳಿ ಮೇಲ್ವೇತುವೆ ನಿರ್ಮಾಣ ಕಾಮಗಾರಿಗೆ ಅನುಷ್ಠಾನಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪೊಲೀಸ್ ಭದ್ರತೆ ಕೇಳಿತ್ತು. ಅಗತ್ಯಕ್ಕೆ ತಕ್ಕಷ್ಟು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ” ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ