ಉಡುಪಿ: ಉಡುಪಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಅಪಹರಣ ನಡೆದಿದ್ದು, ಲವ್ ಜಿಹಾದ್ ಶಂಕೆ ವ್ಯಕ್ತವಾಗಿದೆ. ಒಂದೆಡೆ ಮುಸ್ಲಿಂ ಸಮುದಾಯದ ಯುವಕನೋರ್ವನ ಯುವತಿಯ ಕರೆದೊಯ್ದಿದ್ದು ಮದುವೆಯಾಗಲು ನೋದಂಣಿ ಮಾಡಿಸಿದ್ದಾನೆ. ಇನ್ನೊಂದೆಡೆ ತನ್ನ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ವಿದ್ಯಾರ್ಥಿನಿ ತಂದೆ ದೂರು ನೀಡಿದ್ದು, ಈ ದೂರಿನ ಆಧಾರದ ಮೇಲೆ ಯುವಕನೊಬ್ಬನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮೂಡುಬಿದಿರೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ತನ್ನ ಮಗಳು ತನ್ನ ಚಿಕ್ಕಮ್ಮನ ಮನೆಗೆ ನಡೆದು ಹೋಗುತ್ತಿದ್ದಾಗ ಅಕ್ರಮ್ ಮೊಹಮ್ಮದ್ ಎಂಬ ವ್ಯಕ್ತಿ ತನ್ನ ಸ್ಕೂಟರ್ ನಲ್ಲಿ ಆಕೆಯನ್ನು ಅಪಹರಿಸಿದ್ದಾನೆ ಎಂದು ಗಾಡ್ವಿನ್ ದೇವದಾಸ್ ಎಂಬುವವರು, ದೂರು ನೀಡಿದ್ದಾರೆ. ಕಳೆದ ಮಾ.20ರಂದು ಉಡುಪಿ ಟೌನ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಇದಲ್ಲದೇ ದೇವದಾಸ್ ಅವರು ಹೈಕೋರ್ಟ್ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ತಮ್ಮ ಮಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಉಡುಪಿ ನಗರ ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ. ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿರುವ ವಿಭಾಗೀಯ ಪೀಠ ಏ.4ಕ್ಕೆ ಮುಂದಿನ ವಿಚಾರಣೆ ಮುಂದೂಡಿತು.
ಇದೇ ವೇಳೆ ಮೊಹಮ್ಮದ್ ವಿಶೇಷ ವಿವಾಹ ಕಾಯ್ದೆಯಡಿ ತಮ್ಮ ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸಿದ್ದಾರೆ. ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್ಎಸ್ಎಸ್) ಸೆಕ್ಷನ್ 482 ರ ಅಡಿಯಲ್ಲಿ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ನಿಂದ ಆಕ್ಷೇಪಣೆಗಾಗಿ ಮೊಹಮ್ಮದ್ ಅವರ ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 2 ಕ್ಕೆ ಮುಂದೂಡಲಾಗಿದೆ ಎಂದು ನ್ಯಾಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.