ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡ್ಮೂರು ದಿನಗಳಿಂದ ಸುರಿದ ಭಾರೀ ಮಳೆಯಿಂದ ಸಿಟಿ ಮಂದಿ ಅಕ್ಷರಶಃ ನಲುಗಿ ಹೋಗಿದ್ದು, ಸಾಕಷ್ಟು ಅವಾಂತರ ಸೃಷ್ಟಿ ಆಗಿದೆ. ಒಂದೆಡೆ ಮಹಾಮಳೆಗೆ ರಾಜಧಾನಿ ಬೆಂಗಳೂರು ತತ್ತರಿಸಿ ಹೋದ್ರೆ, ಈ ನಡುವೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಾಧನಾ ಸಮಾವೇಶದ ಸಿದ್ಧತೆಯಲ್ಲಿದ್ದಾರೆ. ಈ ಬಗ್ಗೆ ಪರಿಷತ್ ಶಾಸಕ ಟಿಎ ಶರವಣ ಅವರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಈ ಸಂಬಂಧ ಮಾತನಾಡಿದ ಟಿಎ ಶರವಣ ಅವರು, ಮಹಾಮಳೆಯಿಂದ ರಾಜಧಾನಿ ಬೆಂಗಳೂರು ತತ್ತರಿಸಿ, ಗ್ರೇಟರ್ ಬೆಂಗಳೂರು ಕಲ್ಪನೆಯೇ ಕೊಚ್ಚಿ ಹೋಗುವಂತಹ ಸ್ಥಿತಿಯ ನಡುವೆ ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ಉಸ್ತುವಾರಿ ಸಚಿವರಾದ ಡಿ ಕೆ ಶಿವಕುಮಾರ್ ನೀರೋ ದೊರೆಯಂತೆ ಸಾಧನಾ ಸಮಾವೇಶದ ಸಿದ್ಧತೆಯಲ್ಲಿ ಇರುವುದು ಮಾನವೀಯತೆಯ ಲಕ್ಷಣ ಎಂದು ವಿಧಾನಪರಿಷತ್ ಹಿರಿಯ ಸದಸ್ಯ ಮತ್ತು ಜೆಡಿಎಸ್ ಹಿರಿಯ ನಾಯಕ ಟಿ. ಎ.ಶರವಣ ಟೀಕಿಸಿದ್ದಾರೆ.
ಬೆಂಗಳೂರಲ್ಲಿ ಮಹಾಮಳೆಗೆ ಅಮಾಯಕರ ಪ್ರಾಣಗಳೇ ಕೊಚ್ಚಿ ಹೋಗಿದ್ದು, ಅವುಗಳಿಗೆ ಬೆಲೆಯೇ ಇಲ್ಲದೆ ಅಂಧ ದರ್ಬಾರ್ ನಲ್ಲಿ ತೊಡಗಿರುವ ಕಾಂಗ್ರೆಸ್ ಪಕ್ಷ ಮತ್ತು ಬೆಂಗಳೂರು ಉಸ್ತುವಾರಿ ಸಚಿವರು ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರ ವರ್ತನೆಯನ್ನು ಜನ ಕ್ಷಮಿಸುವುದಿಲ್ಲ ಎಂದು ಶರವಣ ನೊಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ .
ಮಳೆಯಲ್ಲಿ ಜನಸಾಮಾನ್ಯರ ಬದುಕು ಕೊಚ್ಚಿ ಹೋಗಿವೆ. ಕೊಳಗೇರಿ ಪ್ರದೇಶಗಳಲ್ಲಿ, ತಗ್ಗುಪ್ರದೇಶಗಳಲ್ಲಿ ನೀರು ನಿಂತು ಜನ ಬೀದಿಗೆ ಬರುವಂತಾಗಿದ್ದಾರೆ. ಅವರ ಅಗತ್ಯತೆ, ಬೇಕು, ಬೇಡಗಳನ್ನು ಗಮನಿಸಿ ಸಹಾಯ ಹಸ್ತ ಚಾಚಲು ಒಬ್ಬ ಕಾಂಗ್ರೆಸ್ ನಾಯಕ ಇಲ್ಲ ಎನ್ನುವುದು ವಿಪರ್ಯಾಸ, ದುರ್ದೈವದ ಸಂಗತಿ ಎಂದು ಶರವಣ ಬೇಸರ ವ್ಯಕ್ತಪಡಿಸಿದ್ದಾರೆ.
ಸರಕಾರ ತಾತ್ಕಾಲಿಕವಾಗಿ ಹೊಸಪೇಟೆ ಸಮಾವೇಶ ಮುಂದೂಡಬೇಕು. ಇಡೀ ಸಚಿವ ಸಂಪುಟವೇ ಅಲ್ಲಿ ಬೀಡುಬಿಟ್ಟಿದ್ದು ಇಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಇದು ಗ್ರೇಟರ್ ಬೆಂಗಳೂರು ಅಲ್ಲ ಅನಾಥ ಬೆಂಗಳೂರಾಗಿದೆ ಎಂದು ಹೇಳಿದ್ದಾರೆ.