ಬೆಂಗಳೂರು:- ಸಾಲು ಸಾಲು ಬೆಲೆ ಏರಿಕೆಯ ಬೆಂಕಿ ಸಾಮಾನ್ಯ ಜನರ ಮತ್ತು ಬಡವರ ಜೇಬು ಸುಡಲಿವೆ. ರಾಜ್ಯದ ಜನರು ಈಗಾಗಲೇ ಬೆಲೆ ಏರಿಕೆಯಿಂದಾಗಿ ಕಂಗಾಲಾಗಿ ಹೋಗಿದ್ದಾರೆ. ಅತ್ತ ಬಸ್, ಮೆಟ್ರೋ, ಹಾಲು, ಕಾಫಿ, ವಿದ್ಯುತ್, ಟೋಲ್ ಹೀಗೆ ಎಲ್ಲವೂ ದುಬಾರಿ ದುನಿಯಾ ಆಗಿಬಿಟ್ಟಿದೆ. ಒಂದು ವಸ್ತು ಖರೀದಿಸಬೇಕೆಂದರೂ ಹಿಂದೆ ಮುಂದೆ ನೋಡಿಕೊಂಡು ಖರೀದಿ ಮಾಡೋ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ದರ ಏರಿಕೆ ಬಿಸಿ ರಾಜ್ಯದ ಜನರಿಗೆ ತಟ್ಟಾಗಿದೆ. ಜನಸಾಮಾನ್ಯರು, ವಾಹನ ಸವಾರರು, ಗ್ರಾಹಕರು ಯಾರನ್ನೂ ಬಿಟ್ಟಿಲ್ಲ ದರ ಏರಿಕೆಯ ಬಿಸಿ. ಮೆಟ್ರೋ, ಬಸ್, ಹಾಲು, ಕರೆಂಟ್, ಟೋಲ್ ಎಲ್ಲವೂ ದುಬಾರಿಯಾಗಲಿದ್ದು, ಏ.1 ರಿಂದ ಇವುಗಳ ಪರಿಷ್ಕೃತ ದರ ಜಾರಿ ಆಗಿದೆ.
ಹಾಲು, ಮೊಸರು, ವಿದ್ಯುತ್, ಟೋಲ್, ಮುದ್ರಾಂಕ ಶುಲ್ಕ ಸೇರಿ ಅನೇಕ ವಸ್ತುಗಳು ಅಥವಾ ಸೇವೆಗಳ ದರ ಏರಿಕೆ ಜಾರಿಗೆ ಬಂದಿದೆ. ಮತ್ತೊಂದೆಡೆ, ಕಸ ಸಂಗ್ರಹ ಸೆಸ್ ಕೂಡ ಜಾರಿಯಾಗುತ್ತಿದೆ. ಇಂದಿನಿಂದ ಯಾವೆಲ್ಲ ವಸ್ತು, ಸೇವೆಗಳ ದರ ಎಷ್ಟು ಹೆಚ್ಚಳವಾಗಿದೆ ಎಂಬ ಮಾಹಿತಿ ಇಲ್ಲಿದೆ.
ಹಾಲು, ಮೊಸರಿನ ದರ ₹4 ಏರಿಕೆ
ಇಂದಿನಿಂದ ನಂದಿನಿ ಹಾಲಿನ ಎಲ್ಲಾ ಮಾದರಿಯ ಪ್ಯಾಕೆಟ್ ದರ ಪ್ರತಿ ಲೀಟರ್ಗೆ 4 ರೂಪಾಯಿ ಏರಿಕೆಯಾಗಿದೆ. ಜೊತೆಗೆ ಮೊಸರಿನ ದರವೂ ಪ್ರತಿ ಲೀಟರ್ಗೆ 4 ರೂಪಾಯಿ ಏರಿಕೆಯಾಗಿದೆ.
ವಿದ್ಯುತ್ ದರ ಪ್ರತಿ ಯೂನಿಟ್ಗೆ 36 ಪೈಸೆ ಹೆಚ್ಚಳ
ಇಂದಿನಿಂದ ಪ್ರತಿಯೂನಿಟ್ಗೆ 36 ಪೈಸೆ ವಿದ್ಯುತ್ ದರ ಏರಿಕೆಯಾಗಿದೆ. ಇದರ ಜೊತೆಗೆ ಮಾಸಿಕ ಶುಲ್ಕವೂ 20 ರೂಪಾಯಿ ಹೆಚ್ಚಳವಾಗುತ್ತಿದೆ. ಇದರಿಂದ 120 ರೂಪಾಯಿ ಇದ್ದ ನಿಗದಿತ ಶುಲ್ಕ, 140 ರೂಪಾಯಿಗೆ ಏರಿಕೆಯಾಗಲಿದೆ. ಗೃಹಜ್ಯೋತಿ ಬಳಕೆದಾರರು 200 ಯೂನಿಟ್ ದಾಟಿದರೆ, ಬೆಲೆ ಏರಿಕೆ ಬಿಸಿ ತಟ್ಟಲಿದೆ.
ಹಾಲು, ವಿದ್ಯುತ್ ಜೊತೆ ರಾಜಧಾನಿ ಬೆಂಗಳೂರಿನ ಜನರಿಗೆ ಕಸದ ಸಂಗ್ರಹದ ಸೆಸ್ ಹೆಚ್ಚಳ ಮಾಡಿರುವುದು ಶಾಕ್ ಕೊಡಲಿದೆ. ವಸತಿ ಕಟ್ಟಡಗಳಿಗೆ 600 ಚದರಡಿವರೆಗೆ 10 ರೂಪಾಯಿ ಸೆಸ್ ಇರಲಿದ್ದು, 601 ರಿಂದ ಸಾವಿರ ಚದರಡಿವರೆಗೆ 50 ರೂಪಾಯಿ ಇರಲಿದೆ. ಇನ್ನು 1001 ರಿಂದ 2 ಸಾವಿರ ಚದರಡಿವರೆಗೂ 100 ರೂಪಾಯಿ, 2001 ರಿಂದ 3000 ಚದರಡಿವರೆಗೂ 150 ರೂಪಾಯಿ, 3001-4000 ಚದರಡಿ 200 ರೂಪಾಯಿ ಇರಲಿದೆ. ಇನ್ನು 4000 ಚದರಡಿ ಮೇಲ್ಪಟ್ಟು ಇದ್ರೆ, 400 ರೂಪಾಯಿ ಕಸದ ಸೆಸ್ ಕೊಡಬೇಕಾಗುತ್ತದೆ.
ಇಂದಿನಿಂದ ಉಕ್ಕು, ವಾಹನಗಳ ಬಿಡಿಭಾಗಳ ಆಮದು, ಉಕ್ಕುಗಳ ಆಮದು ದರ ಹೆಚ್ಚಾಗುತ್ತಿದೆ. ಇದರ ಪರಿಣಾಮ ಇಂದಿನಿಂದ ಹೊಸ ವಾಹನ ಖರೀದಿಸಿದರೆ ಬೆಲೆ ಹೆಚ್ಚು ತೆರಬೇಕಾಗುತ್ತದೆ.
ಇನ್ನು ಹೆದ್ದಾರಿ ಪ್ರಾಧಿಕಾರ ಕೂಡ ಟೋಲ್ ದರವನ್ನು ಶೇಕಡಾ 3 ರಿಂದ 5 ರಷ್ಟು ಹೆಚ್ಚಳ ಮಾಡುತ್ತಿದ್ದು, ಇಂದಿನಿಂದಲೇ ಜಾರಿಗೆ ಬರುತ್ತಿದೆ. ರಾಜ್ಯದ ಒಟ್ಟು 66 ಟೋಲ್ ಪ್ಲಾಜಾಗಳಲ್ಲಿನ ದರ ಏರಿಕೆ ವಾಹನ ಸವಾರರಿಗೆ ಬಿಸಿ ತಟ್ಟಲಿದೆ.,
ಮನೆ 3 ಫ್ಲೋರ್ ಇದ್ದು ಲಿಫ್ಟ್ ಬಳಸುತ್ತಿದ್ದರೆ, ಅದರ ಪರಿಶೀಲನೆ ಮತ್ತು ರಿನಿವಲ್ಗೆ ಈವರೆಗೆ 800 ರೂಪಾಯಿಯಿಂದ 1 ಸಾವಿರ ರೂಪಾಯಿ ಇತ್ತು. ಅದು ಈಗ 5 ಸಾವಿರ ರೂಪಾಯಿಯಿಂದ 8 ಸಾವಿರ ರೂಪಾಯಿಗೆ ಏರಿಕೆಯಾಗಲಿದೆ.