ಕಾರವಾರ : ದಾಂಡೇಲಿಯ ಗಾಂಧಿನಗರ ಬಡಾವಣೆಯ ಮನೆಯೊಂದರಲ್ಲಿ ನಕಲಿ ನೋಟಗಳ ಕಂತೆ ಪತ್ತೆ ಪ್ರಕರಣ ಸಂಬಂಧ ಇದೀಗ ಆರೋಪಿಯ ಬಂಧನವಾಗಿದೆ. ಉತ್ತರಪ್ರದೇಶದ ಲಖನೌನಲ್ಲಿ ಆರೋಪಿಯನ್ನು ಬಂಧಿಸಿ ಉತ್ತರ ಕನ್ನಡಕ್ಕೆ ಕರೆತಂದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಅರ್ಷದ್ ಅಂಜುಂಖಾನ್ನನ್ನು ಬಂಧಿತ ಆರೋಪಿಯಾಗಿದ್ದಾನೆ. ನೂರಜಾನ್ ಜುಂಜುವಾಡ್ಕರ್ ಎಂಬುವರ ಮನೆಯಲ್ಲಿ ಅರ್ಷದ್ ಬಾಡಿಗೆಗೆ ವಾಸವಾಗಿದ್ದ. ಕಳೆದ ಒಂದು ತಿಂಗಳಿನಿಂದ ಈತ ಆ ಮನೆಯಲ್ಲಿ ಇಲ್ಲದೇ ಇರುವುದು, ಹಿಂಬದಿಯ ಬಾಗಿಲ ಚಿಲಕ ಸರಿ ಹಾಕದೇ ಇರುವುದನ್ನು ತಿಳಿದು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಈ ವೇಳೆ ದಾಂಡೇಲಿ ನಗರ ಠಾಣೆಯ ಪರಿಶೀಲನೆ ನಡೆಸಿದ ವೇಳೆ 14 ಕೋಟಿ ಮೌಲ್ಯದ 500 ರೂ. ಮುಖ ಬೆಲೆಯ ಕಂತೆ ಕಂತೆ ನೋಟುಗಳು ಕಾಣಿಸಿದ್ದವು. ಅವುಗಳ ಬಂಡಲ್ ಮೇಲೆ ‘ಮೂವಿ ಪರ್ಪಸ್ ಓನ್ಲಿ’ ಎಂದು ಬರೆದಿತ್ತು. ಆ ಬಳಿಕ ಸುಮ್ಮನಾಗಿದ್ದ ಪೊಲೀಸರಿಗೆ ಅರ್ಷದ್ ಹೈದರಾಬಾದ್ , ಗೋವಾ ಪೊಲೀಸರಿಗೂ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದು ಅರಿವಾದ ಕೂಡಲೇ ಪೊಲೀಸರು ಮೊಬೈಲ್ ಟವರ್ ಲೊಕೇಶನ್ ಟ್ರೇಸ್ ಮಾಡಿದ್ದಾರೆ. ಆಗ ಆರೋಪಿ ಲಖನೌನಲ್ಲಿರುವುದು ಗೊತ್ತಾಗಿದ್ದು, ಆತನ ಬಂಧಿಸಿದ್ದಾರೆ