ಹೃದಯಾಘಾತಕ್ಕೆ ಖ್ಯಾತ ಹಾಲಿವುಡ್ ನಟ ಮೈಕಲ್ ಮ್ಯಾಡ್ಸನ್ ಸಾವನ್ನಪ್ಪಿದ್ದಾರೆ. ಮೈಕಲ್ ಅವರು ಅಮೆರಿಕದ ಕ್ಯಾಲಿಫೋರ್ನಿಯಾದ ಮ್ಯಾಡ್ಸನ್ ನಗರದಲ್ಲಿ ನೆಲೆಸಿದ್ದರು. ಮನೆಯಲ್ಲಿಯೇ ಅವರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
1957ರಲ್ಲಿ ಶಿಕಾಗೊನಲ್ಲಿ ಜನಿಸಿದ ಮೈಕಲ್ ಅವರ ತಾಯಿ ಸಿನಿಮಾಕರ್ಮಿಯಾಗಿದ್ದರು. ಅವರ ತಂದೆ ಅಗ್ನಿಶಾಮಕ ದಳದಲ್ಲಿ ಕೆಲಸ ಮಾಡುತ್ತಿದ್ದರು. ಮೈಕಲ್ ಅವರ ಸಹೋದರ ವರ್ಜಿನಿಯಾ ಮ್ಯಾಡ್ಸನ್ ಸಹ ಹಾಲಿವುಡ್ನ ಒಳ್ಳೆಯ ನಟರಲ್ಲಿ ಒಬ್ಬರಾಗಿದ್ದು, ಒಮ್ಮೆ ಆಸ್ಕರ್ಗೆ ನಾಮಿನೇಟ್ ಸಹ ಆಗಿದ್ದರು. ಸಣ್ಣ ಪುಟ್ಟ ಪಾತ್ರಗಳಿಂದ ಆರಂಭಿಸಿ ಸಿನಿಮಾಗಳಲ್ಲಿ ನಾಯಕನಾಗಿ, ವಿಲನ್ ಆಗಿ ನಟಿಸಿದ್ದಾರೆ ಮೈಕಲ್. ಅವರು ಟಿವಿ ಶೋ ಮತ್ತು ವಿಡಿಯೋ ಗೇಮ್ಸ್ಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಪತ್ನಿ, ಸಹೋದರಿ ಮತ್ತು ನಾಲ್ಕು ಮಕ್ಕಳನ್ನು ಮೈಕಲ್ ಮ್ಯಾಡ್ಸನ್ ಹೊಂದಿದ್ದರು. ಅವರ ಮೊದಲ ಮಗ 2022 ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. ಆ ಘಟನೆಯ ಬಳಿಕ ಮೈಕಲ್ ಖಿನ್ನತೆಗೆ ಒಳಗಾಗಿದ್ದರು. ಅವರ ಈಗಿನ ಹೃದಯಾಘಾತಕ್ಕೂ ಅದುವೇ ಕಾರಣ ಎನ್ನಲಾಗುತ್ತಿದೆ. ಮೈಕಲ್ ನಿಧನ ಹೊಂದಿದ ಸುದ್ದಿಯನ್ನು ಅವರ ಸಹೋದರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.