ಬಾಗಲಕೋಟೆ: ಕ್ರಿಕೆಟ್ ಬಾಲ್ ವಿಚಾರವಾಗಿ ನಡೆದ ಜಗಳ ಶಿಕ್ಷಕನಿಗೆ ಬಾಟಲ್ ಇರಿಯುವ ಹಂತಕ್ಕೆ ಹೋದ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದಿದೆ.
ಶಿಕ್ಷಕ ರಾಮಪ್ಪ ಪೂಜಾರಿ(36) ಎಂಬುವರ ಮೇಲೆ ಪವನ್ ಜಾಧವ್(21) ಎಂಬಾತ ಚಾಕು ಒಡೆದ ಬಾಟಲ್ ನಿಂದ ಮುಖ, ತಲೆ ಭಾಗಕ್ಕೆ ಇರಿದಿದ್ದಾನೆ. ಶಿಕ್ಷಕನಿಗೆ ಚಾಕುವಿನಿಂದ ಇರಿದ ವಿಡಿಯೊ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಶಿಕ್ಷಕ ರಾಮಪ್ಪ ಹಾಗೂ ಯುವಕ ಪವನ್, ಇಬ್ಬರೂ ಅಕ್ಕಪಕ್ಕದ ಮನೆಯವರು. ಬುಧವಾರ ಕ್ರಿಕೆಟ್ ಆಡುವ ವೇಳೆ ಬಾಲ್ ಶಿಕ್ಷಕನ ಮನೆ ಕಡೆ ಹೋಗಿತ್ತು. ಮನೆಯೊಳಗೆ ಬಾಲ್ ಹೋಗಿದೆ ಕೊಡಿ ಎಂದು ಪವನ್ ಜಾಧವ್ ಕೇಳಿದ್ದಾನೆ. ಆದರೆ ಇಲ್ಲಿ ಬಾಲ್ ಬಂದಿಲ್ಲ ಎಂದು ಶಿಕ್ಷಕ ರಾಮಪ್ಪ ಪೂಜಾರಿ ಹೇಳಿದ್ದಾರಂತೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಕೋಪಗೊಂಡ ಪವನ್, ಶಿಕ್ಷಕ ರಾಮಪ್ಪ ಕೆಲಸ ಮಾಡುತ್ತಿದ್ದ ಬಿಎಲ್ ಡಿಇ ಶಾಲೆಗೆ ಹೋಗಿ ಬಾಟಲ್ ನಿಂದ ಇರಿದಿದ್ದಾನೆ. ಗಾಯಾಳು ಶಿಕ್ಷಕ ರಾಮಪ್ಪ ಅವರನ್ನು ಸಾವಳಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಸಾವಳಗಿ ಪೊಲೀಸರು, ಯುವಕ ಪವನ್ ನನ್ನು ಬಂಧಿಸಿದ್ದಾರೆ.