ನವದೆಹಲಿ: ಮಾಜಿ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಅವರನ್ನು ಕೇಂದ್ರ ಸಾರ್ವಜನಿಕ ಸೇವಾ ಆಯೋಗದ (UPSC) ಅಧ್ಯಕ್ಷರನ್ನಾಗಿ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಏಪ್ರಿಲ್ 29 ರಂದು ಪ್ರೀತಿ ಸುದಾನ್ ರವರ ಅಧಿಕಾರಾವಧಿ ಪೂರ್ಣಗೊಂಡ ನಂತರ ಅಜಯ್ ಕುಮಾರ್ ಅವರನ್ನು ನೇಮಿಸಲಾಗಿದೆ.
ಯಾರು ಈ ಅಜಯ್ ಕುಮಾರ್?
ಅಜಯ್ ಕುಮಾರ್ ಅವರು, 1985ನೇ ಬ್ಯಾಚ್ನಲ್ಲಿ ನಿವೃತ್ತಿ ಹೊಂದಿದ ಕೇರಳ ಕೇಡರ್ನ ಭಾರತೀಯ ಆಡಳಿತ ಸೇವೆಗಳ (ಐಎಎಸ್) ಅಧಿಕಾರಿ. ಇವರು ಐಐಟಿ ಕಾನ್ಪುರ್ ಹಳೆಯ ವಿದ್ಯಾರ್ಥಿ ಸಹ. ಇವರು 2019 ರ ಆಗಸ್ಟ್ 23 ರಿಂದ ಅಕ್ಟೋಬರ್ 31, 2022 ರವರೆಗೆ ರಕ್ಷಣಾ ಕಾರ್ಯದರ್ಶಿ ಆಗಿ ಸೇವೆ ಸಲ್ಲಿಸಿದ್ದಾರೆ.
ಪಿಎಂ ಮೋದಿ ನೇತೃತ್ವದ ಡಿಜಿಟಲ್ ಇಂಡಿಯಾ ಯೋಜನೆಗಳಲ್ಲಿ ಹಲವು ಪ್ರಮುಖ ಪಾತ್ರಗಳನ್ನು ಅಜಯ್ ಅವರು ನಿರ್ವಹಿಸಿದ್ದಾರೆ, ಇಲೆಕ್ಟ್ರಾನಿಕ್ಸ್ ಅಂಡ್ ಐಟಿ ಸಚಿವಾಲಯದ ಉನ್ನತ ಅಧಿಕಾರಿಯಾಗಿ ಸೇವೆಸಲ್ಲಿಸಿದ್ದಾರೆ. ದೀರ್ಘಕಾಲ ರಕ್ಷಣಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಇವರು, ಯುಪಿಐ, ಆಧಾರ್, myGov, ಮತ್ತು ಸರ್ಕಾರಿ ಇ-ಮಾರ್ಕೆಟ್ಪ್ಲೇಸ್ ಕಾರ್ಯಕ್ರಮಗಳು, ಅಭಿವೃದ್ಧಿಪಡಿಸುವಲ್ಲಿ ತಮ್ಮ ದಕ್ಷತೆ ತೋರಿದ್ದಾರೆ. ಅಷ್ಟೇ ಅಲ್ಲದೇ ನ್ಯಾಷನಲ್ ಇಲೆಕ್ಟ್ರಾನಿಕ್ಸ್ ಪಾಲಿಸಿ 2012 ರಚಿಸುವ ಮೂಲಕ ಭಾರತದ ಇಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಉತ್ಪಾದನೆ ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ನೀಡಿದ್ದಾರೆ.
ರಕ್ಷಣಾ ಕಾರ್ಯದರ್ಶಿಯಾಗಿ ನಿವೃತ್ತರಾದ ಭಾರತದ ಅತ್ಯಂತ ಹಿರಿಯ ಅಧಿಕಾರಿಗಳಲ್ಲಿ ಒಬ್ಬರು, ತಮ್ಮ ಪರಿವರ್ತನಾತ್ಮಕ ರಕ್ಷಣಾ ಸುಧಾರಣೆಗಳಿಗೆ ಹೆಸರುವಾಸಿಯಾಗಿದ್ದಾರೆ. ರಕ್ಷಣಾ ಪಡೆಗಳ ಮುಖ್ಯಸ್ಥರ ರಚನೆ, ಆತ್ಮನಿರ್ಭರ ಭಾರತ ಉಪಕ್ರಮಗಳು, ಅಗ್ನಿವೀರ್ ಯೋಜನೆ ಮತ್ತು ಸಶಸ್ತ್ರ ಕಾರ್ಖಾನೆಗಳ ಕಾರ್ಪೋರೇಟೀಕರಣಕ್ಕೆ ಕೊಡುಗೆ ನೀಡಿದ್ದಾರೆ.