ಮಂಡ್ಯ :ಮದ್ದೂರು ನಗರಸಭೆ ವ್ಯಾಪ್ತಿಗೆ ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯನ್ನು ಸೇರ್ಪಡೆಗೊಳಿಸಲು ಮುಂದಾಗಿರುವುದನ್ನು ಖಂಡಿಸಿ ಗ್ರಾಮಸ್ಥರು ಶನಿವಾರ ಗೆಜ್ಜಲಗೆರೆ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು. ಗ್ರಾಮ ಪಂಚಾಯಿತಿ ಮುಂದೆ ಜಮಾವಣೆಗೊಂಡ ಗ್ರಾಮ ಪಂಚಾಯಿತಿ ಸದಸ್ಯರು, ರೈತ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಜೊತೆಗೂಡಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಟನೆಯನ್ನು ಉದ್ದೇಶಿಸಿ ಮಾತನಾಡಿದ ರೈತ ನಾಯಕಿ ಸುನಂದಾ ಜಯರಾಂ ಮದ್ದೂರು ಪುರಸಭೆಯನ್ನು ರಾಜ್ಯ ಸರ್ಕಾರ ನಗರಸಭೆಯನ್ನಾಗಿ ಮೇಲ್ದರ್ಜೆಗೆರಿಸಿ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಆದರೆ, ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದರು.
ಕಿತ್ತಳೆ ಹಣ್ಣಿನ ಸಿಪ್ಪೆ ಎಸೆಯದಿರಿ: ಕಹಿಯಾದ್ರೂ ಇದರ ರಸದಲ್ಲಿ ಅಡಗಿದೆ ಆರೋಗ್ಯ ಸಿಹಿ!
ಗ್ರಾಮ ಪಂಚಾಯಿತಿಯನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆಗೂ ಮುನ್ನ ಜಿಲ್ಲಾಡಳಿತ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಬೇಕಿತ್ತು. ಆದರೆ, ಗ್ರಾಮಸ್ಥರ ವಿರೋಧದ ನಡುವೆಯೂ ಗ್ರಾಮ ಪಂಚಾಯಿತಿಯ ತುರ್ತು ಸಭೆಯಲ್ಲಿ ಅನುಮೋದನೆ ನೀಡಿ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ ಪರಿಣಾಮ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದ್ದು, ಇದಕ್ಕೆ ಗ್ರಾಮಸ್ಥರ ತೀವ್ರ ವಿರೋಧವಿದೆ ಎಂದು ಕಿಡಿಕಾರಿದರು.
ನಗರಸಭೆಗೆ ನಮ್ಮ ಗ್ರಾಮಗಳು ಸೇರ್ಪಡೆಯಾದರೇ ತೆರಿಗೆ ಕಟ್ಟುವುದು ಜಾಸ್ತಿ ಆಗುತ್ತೆ. ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಪೈಪೋಟಿ ಜಾಸ್ತಿ ಆಗುತ್ತೆ. ಅಲ್ಲದೇ ಈಗ ದೊರೆಯುತ್ತಿರುವ ಗ್ರಾಮೀಣ ಕೃಪಾಂಕ ಸಹ ಹೋಗುತ್ತದೆ. ನರೇಗಾದ ಕೆಲಸಗಳಿಗೆ ಬಡ ಜನರು ಸಿಗಲ್ಲ. ಅದಲ್ಲದೇ ಗೆಜ್ಜಲಗೆರೆ ಗ್ರಾಮ ಪಂಚಾಯಿತಿಗೆ ತೆರಿಗೆ ರೂಪದಲ್ಲಿ ವಾರ್ಷಿಕ 1 ಕೋಟಿ ರೂಪಾಯಿಗೂ ಹೆಚ್ಚು ಹಣ ಬರುತ್ತಿದ್ದು, ಗ್ರಾಮಗಳ ಅಭಿವೃದ್ಧಿಗೆ ಅದೇ ಹಣ ಸಾಕಾಗುತ್ತದೆ ಹೀಗಾಗಿ ನಮಗೆ ನಗರಸಭೆ ಬೇಡ, ಗ್ರಾಮ ಪಂಚಾಯಿತಿಯೇ ಸಾಕು ಎಂದು ರೈತ ನಾಯಕಿ ಸುನಂದಾ ಜಯರಾಂ ವಿರೋಧ ವ್ಯಕ್ತಪಡಿಸಿದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಯೋಗೇಶ್ ಮಾತನಾಡಿ, ಮದ್ದೂರು ಪುರಸಭೆ ವ್ಯಾಪ್ತಿಯಲ್ಲಿನ ಈಗಿನ ವಾರ್ಡ್ಗಳೇ ಅಭಿವೃದ್ಧಿ ಕಂಡಿಲ್ಲ. ಸರಿಯಾದ ರಸ್ತೆಗಳಿಲ್ಲ, ಚರಂಡಿಯಿಲ್ಲ. ಕುಡಿಯುವ ನೀರಿನ ಸೌಲಭ್ಯ ಹಾಗೂ ಸ್ಮಶಾನಗಳು ಸೇರಿದಂತೆ ಪಟ್ಟಣ ವ್ಯಾಪ್ತಿಯಲ್ಲಿಯೇ ಅವ್ಯವಸ್ಥೆಗಳು ತುಂಬಿರುವಾಗ ಸುತ್ತಮುತ್ತಲಿನ ಗ್ರಾಮಗಳನ್ನು ಸೇರಿಸಿದರೆ ವ್ಯಾಪ್ತಿ ದೊಡ್ಡದಾಗುತ್ತದೆ. ಆಗ ಗ್ರಾಮಗಳ ಜನ ಅಭಿವೃದ್ಧಿಗೆ ಪರದಾಡಬೇಕಾಗುತ್ತದೆ ಹೀಗಾಗಿ ನಮ್ಮ ಗ್ರಾಮ ಪಂಚಾಯಿತಿಯನ್ನು ನಗರಸಭೆ ವ್ಯಾಪ್ತಿಗೆ ಸೇರಿಸದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು ಅದು ಬಿಟ್ಟು ಜನಪ್ರತಿನಿಧಿಗಳು ಸೇರಿಸಲು ಮುಂದಾದರೇ ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಯೋಗೇಶ್ ಎಚ್ಚರಿಕೆ ನೀಡಿದರು.
ಇನ್ನು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ನರೇಗಾ ಸಹಾಯಕ ನಿರ್ದೇಶಕ ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಗ್ರಾಪಂ ಅಧ್ಯಕ್ಷೆ ರಾಧಾ ರಾಘವೇಂದ್ರ, ರೈತ ಮುಖಂಡರಾದ ಲಿಂಗಪ್ಪಾಜಿ, ಜಿ.ಎ.ಶಂಕರ್, ಮಂಜುನಾಥ್, ಪುಟ್ಟಸ್ವಾಮಿ, ಜಿ.ಸಿ.ಮಹೇಂದ್ರ, ರಾಮು, ಯಶೋದಮ್ಮ, ಭಾಗ್ಯ, ಪುಷ್ಪಾ, ಅಶ್ವಿನಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ