ಹುಬ್ಬಳ್ಳಿ : ಅಪ್ರಾಪ್ತ ಬಾಲಕಿ ಕೊಲೆ ಮಾಡಿ ಪೊಲೀಸ್ ಎನ್ಕೌಂಟರ್ಗೆ ಬಲಿಯಾದ ಬಿಹಾರ ಮೂಲದ ರಿತೇಶಕುಮಾರ ಅಂತ್ಯ ಸಂಸ್ಕಾರಕ್ಕೆ ಕೋರ್ಟ್ ಆದೇಶಿಸಿದ್ದು, ಕೆಎಂಸಿಆರ್ಐ, ಸಿಐಡಿ ಪೊಲೀಸರು ನಿರಾಳ ಆಗಿದ್ದಾರೆ. ಈ ನಡುವೆ ಈತನ ಮೂಲ ಯಾವುದು? ಕುಟುಂಬಸ್ಥರು ಯಾರು? ಎಂಬುದು ಮಾತ್ರ ಇನ್ನೂ ಗೊತ್ತಾಗಿಲ್ಲ. ಏ.13ರಂದು ರಿತೇಶ್ ಕುಮಾರ್ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಆಕೆಯನ್ನು ನಿರ್ಮಾಣ ಹಂತದ ಕಟ್ಟಡದ ಶೌಚಾಲಯದೊಳಗೆ ಹತ್ಯೆ ಮಾಡಿ ಪರಾರಿಯಾಗಿದ್ದ. ಸಾರ್ವಜನಿಕರು ರೊಚ್ಚಿಗೆದ್ದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಎಲ್ಲೆಡೆ ತೀವ್ರ ರೀತಿಯಲ್ಲಿ ಪ್ರತಿಭಟನೆಗಳು ನಡೆದಿದ್ದವು.
ಇದರಿಂದ ಪೊಲೀಸರು ಒತ್ತಡಕ್ಕೆ ಮಣಿದು ಸಂಜೆ ವೇಳೆಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆತನ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುವುದಕ್ಕಾಗಿ ಆತ ಇದ್ದ ಶೆಡ್ ಬಳಿ ಕರೆದುಕೊಂಡು ಹೋಗಿದ್ದರು. ರಾಯನಾಳ ಬ್ರಿಡ್ಜ್ ಬಳಿ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದರೂ ಈತ ಪರಾರಿಯಾಗುವ ತನ್ನ ಪ್ರಯತ್ನ ಮಾತ್ರ ಮುಂದುವರೆಸಿದ್ದ. ಆಗ ಆತ್ಮರಕ್ಷಣೆಗಾಗಿ ಪೊಲೀಸರು ಈತನ ಮೇಲೆ ಗುಂಡು ಹಾರಿಸಿದ್ದರು. ಆಗ ಈತ ಸಾವಿಗೀಡಾಗಿದ್ದ.
ಬಾಲಕಿ ಅತ್ಯಾಚಾರಕ್ಕೆ ಯತ್ನ, ಕೊಲೆ: ಹುಬ್ಬಳ್ಳಿಯಲ್ಲಿ ಪಾಲಕರು, ಗ್ರಾಮಸ್ಥರಿಂದ ಪ್ರತಿಭಟನೆ!
ಈ ನಡುವೆ ಈತನ ಶವದ ಅಂತ್ಯಸಂಸ್ಕಾರ ಮಾಡಬಾರದು. ಸಾಕ್ಷ್ಯ ನಾಶವಾಗಬಹುದು ಎಂದು ಕೋರಿ ಬೆಂಗಳೂರು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಈತನ ಮರಣೋತ್ತರ ಪರೀಕ್ಷೆ ನಡೆಸಿ ಕೋರ್ಟ್ ಆದೇಶಕ್ಕಾಗಿ ಕೆಎಂಸಿಆರ್ಐ ವೈದ್ಯರು ಹಾಗೂ ಸಿಐಡಿ ಪೊಲೀಸರು ಕಾಯುವ ಅನಿವಾರ್ಯತೆ ಎದುರಾಗಿತ್ತು.
ಈತನ ಎನ್ಕೌಂಟರ್ ಆಗುವ ಮುನ್ನ ಈತ ತಾನು ಬಿಹಾರದ ಪಾಟ್ನಾದವನು ಎಂದು ಹೇಳಿಕೊಂಡಿದ್ದ. ಕಟ್ಟಡದ ಕೆಲಸ ಮಾಡುತ್ತಿದ್ದೇನೆ ಎಂದಷ್ಟೇ ಹೇಳಿದ್ದನಂತೆ. ಹೀಗಾಗಿ, ಈತನ ಕುಟುಂಬಸ್ಥರ ಪತ್ತೆಗಾಗಿ ಪೊಲೀಸರು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಪೊಲೀಸರ 2-3 ತಂಡಗಳು ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳಲ್ಲೆಲ್ಲ ಸುತ್ತಾಡಿ ಬಂದಿದೆ. ಆದರೂ, ಈತನ ಕುಟುಂಬಸ್ಥರ ಪತ್ತೆ ಮಾತ್ರ ಆಗಿಲ್ಲ. ಹೀಗಾಗಿ, ಇದೀಗ ಸಿಐಡಿ ಪೊಲೀಸರು ಶವದ ಅಂತ್ಯ ಸಂಸ್ಕಾರವನ್ನು ಎರಡು ದಿನಗಳ ಒಳಗಾಗಿ ನಡೆಸಲಿದ್ದಾರೆ ಎಂದು ವರದಿಯಾಗಿದೆ.