ಆನೇಕಲ್:- ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಸೂಟ್ಕೇಸ್ನಲ್ಲಿ ಪತ್ತೆಯಾಗಿದ್ದ ಅಪರಿಚಿತ ಬಾಲಕಿಯ ಶವ ಪ್ರಕರಣವನ್ನು ಭೇಧಿಸುವಲ್ಲಿ ಸೂರ್ಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿರುವ ಬಿಹಾರ ಮೂಲದ ಅಶಿಕ್ ಕುಮಾರ್ (22) ಮುಖೇಶ್ ರಾಜಬನ್ಶಿ (35), ಇಂದುದೇವಿ (32) ರಾಜರಾಮ್ ಕುಮಾರ್ (18) ಪಿಂಟು ಕುಮಾರ್ (18), ಕಾಲು ಕುಮಾರ್(17) ರಾಜು ಕುಮಾರ್(17) ಬಂಧಿತರು.
ಎ1 ಆಶೀಕ್ ಕುಮಾರ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕಾಚನಾಯಕನಹಳ್ಳಿಯಲ್ಲಿ ವಾಸವಾಗಿದ್ದನು. ಆಶೀಕ್ ಕುಮಾರ್ ಮೇ 13ರಂದು ಬೆಂಗಳೂರಿನಿಂದ ಬಿಹಾರಕ್ಕೆ ತೆರಳಿದ್ದನು. ಎರಡೇ ದಿನದಲ್ಲಿ ಪಕ್ಕದ ಗ್ರಾಮದ ಬಾಲಕಿಯನ್ನು ಬಲೆಗೆ ಕೆಡವಿಕೊಂಡಿದ್ದನು. ಮೇ 15ರಂದು ಆಶೀಕ್ ಕುಮಾರ್ ಬಾಲಕಿಯನ್ನು ಕರೆದುಕೊಂಡು ಬಿಹಾರದಿಂದ ಬೆಂಗಳೂರಿಗೆ ಹೊರಟಿದ್ದಾನೆ. ಮೇ 18ರಂದು ಇಬ್ಬರೂ ಬೆಂಗಳೂರಿಗೆ ತಲುಪಿದ್ದಾರೆ.
ಅಂದು ಬಾಲಕಿ ಜೊತೆ ಆಶೀಕ್ ಕುಮಾರ್ ಬೆಂಗಳೂರು ನಗರ ಸುತ್ತಾಡಿದ್ದಾನೆ. ಆರೋಪಿ ಆಶೀಕ್ ಕುಮಾರ್ ಅದೇ ದಿನ ರಾತ್ರಿ ಸಂಬಂಧಿ ಮುಖೇಶ್ ಮನೆಗೆ ಬಾಲಕಿಯನ್ನು ಕರೆದುಕೊಂಡು ಹೋಗಿದ್ದಾನೆ. ಮರುದಿನ ಬಾಲಕಿ ಲೈಂಗಿಕ ಕ್ರಿಯೆಗೆ ಸಹಕರಿಸದ ಹಿನ್ನೆಲೆಯಲ್ಲಿ ಆಕೆಯ ಜೊತೆಗೆ ಜಗಳವಾಡಿದ್ದಾನೆ. ನಂತರ, ಆಶೀಕ್ ಕುಮಾರ್ ಬಿಯರ್ ಬಾಟಲ್ನಿಂದ ಯುವತಿಯ ಖಾಸಗಿ ಅಂಗಕ್ಕೆ ಹಲ್ಲೆ ಮಾಡಿದ್ದಾನೆ. ಬಳಿಕ ರಾಡ್ನಿಂದಲೂ ಬಾಲಕಿ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆ ಬಳಿಕ ಆಶೀಕ್ ಕುಮಾರ್ ಬಾಲಕಿಗೆ ಉಸಿರುಗಟ್ಟಿಸಿ ಕೊಂಲೆ ಮಾಡಿದ್ದಾನೆ.
ಬಾಲಕಿಯನ್ನು ಕೊಲೆ ಮಾಡಿದ ಬಳಿಕ ಆರೋಪಿ ಆಶೀಕ್ ಕುಮಾರ್ ಸಂಬಂಧಿಗಳಿಗೆ ವಿಚಾರ ತಿಳಿಸಿದ್ದಾನೆ. ನಂತರ, ಆರೋಪಿಗಳು ಬಾಲಕಿಯ ಶವವನ್ನು ಸೂಟ್ಕೇಸ್ನಲ್ಲಿ ಹಾಕಿದ್ದಾರೆ. ಎಲ್ಲರೂ ಸೇರಿಕೊಂಡು ಕ್ಯಾಬ್ನಲ್ಲಿ ಬಾಲಕಿಯ ಶವ ತೆಗೆದುಕೊಂಡು ಹಳೇ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಬಂದಿದ್ದಾರೆ. ರೈಲು ಹಳಿಯಿಂದ ಕೆಳಕ್ಕೆ ಸೂಟ್ಕೇಸ್ ಎಸೆದು ಪರಾರಿಯಾಗಿದ್ದಾರೆ.
ಪ್ರಕರಣವನ್ನು ಸೂರ್ಯನಗರ ಠಾಣೆ ಪೊಲೀಸರು ಪೋಕ್ಸೋ ಅಡಿ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದರು. ಆರೋಪಿಗಳ ಚಲನವಲನ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಆರೋಪಿಗಳು ಸೂಟ್ಕೇಸ್ನಲ್ಲಿ ಶವ ಸಾಗಿಸುವ ದೃಶ್ಯಗಳು ಕೂಡ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸಿಸಿಟಿವಿ ದೃಶ್ಯ ಆಧರಿಸಿ, ಆರೋಪಿಗಳ ಜಾಡು ಹಿಡಿದು ಹೊರಟ ಪೊಲೀಸರು, ಬಿಹಾರದಲ್ಲಿ ಏಳೂ ಮಂದಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ