ತುಮಕೂರು: “ಜಾತಿ ಧರ್ಮಗಳ ತಾರತಮ್ಯವಿಲ್ಲದೆ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಸಮಾಜಕ್ಕೆ ಸಾವಿರಾರು ಮುತ್ತುರತ್ನಗಳನ್ನು ನೀಡಿರುವ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ “ಭಾರತ ರತ್ನ” ಪುರಸ್ಕಾರ ನೀಡಿ ಗೌರವಿಸಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸಚಿವ ರಾಜನಾಥ್ ಸಿಂಗ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ತುಮಕೂರಿನ ಸಿದ್ದಗಂಗಾಮಠದಲ್ಲಿ ನಡೆದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ 118 ನೇ ಜಯಂತಿ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ಶ್ರೀಗಳಿಗೆ ಭಾರತ ರತ್ನ ನೀಡುವ ವಿಚಾರ ತರಬೇಕು ಎಂದು ರಾಜ್ಯದ ಜನರ ಹಾಗೂ ರಾಜ್ಯ ಸರ್ಕಾರದ ಪರವಾಗಿ ಮನವಿ ಮಾಡುತ್ತೇನೆ. ಶ್ರೀ ಶಿವಕುಮಾರ ಸ್ವಾಮೀಜಿಗಳು ಈ ಮಠದ ದಾಸೋಹ ಪರಿಕಲ್ಪನೆ ಮೂಲಕ ಅನೇಕ ಸಾಧಕರನ್ನು ಸಮಾಜಕ್ಕೆ ನೀಡಿದ ಪರಮ ಪೂಜ್ಯರು ಹಾಗೂ ಸಿದ್ದಗಂಗಾ ಮಠ ಪವಿತ್ರ ಸ್ಥಳ” ಎಂದು ಹೇಳಿದರು.
“ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ, ಈ ಮೂರರ ನೆನಪು ಮನುಷ್ಯತ್ವದ ಮೂಲ. ಮನುಷ್ಯತ್ವ ಮೋಕ್ಷಕ್ಕೆ ಮೂಲ. ಹೀಗೆ ಮನುಷ್ಯತ್ವದ ಪ್ರತಿರೂಪವಾದ ಶಿವಕುಮಾರಸ್ವಾಮೀಜಿ ಅವರನ್ನು ನೆನೆಸಿಕೊಂಡು, ಅವರ ಆಚಾರ ವಿಚಾರಗಳನ್ನು ಮೈಗೂಡಿಸಿಕೊಳ್ಳಲು ನಾವು ಇಲ್ಲಿ ಸೇರಿದ್ದೇವೆ” ಎಂದರು.
ರಾಜನಾಥ್ ಸಿಂಗ್ ಮೌನ
ಆದರೆ, ಉದ್ಘಾಟನಾ ಭಾಷಣ ಮಾಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಶ್ರೀ ಶಿವಕುಮಾರ ಸ್ವಾಮೀಜಿಗಳ ಗುಣಗಾನ ಮಾಡದರು. ಆದ್ರೆ, ಎಲ್ಲಿಯೂ ಶ್ರೀಗಳಿಗೆ ಮರಣೋತ್ತರ ಭಾರತರತ್ನ ನೀಡುವ ಬೇಡಿಕೆ ಬಗ್ಗೆ ಚಕಾರ ಎತ್ತಲಿಲ್ಲ.