ರಾಮನಗರ : ರಾಜ್ಯದಲ್ಲಿ ಸೆಪ್ಟೆಂಬರ್ ಕ್ರಾಂತಿ ಹೇಳಿಕೆ ಬೆನ್ನಲೇ ಕಾಂಗ್ರೆಸ್ ಹೈಕಮಾಂಡ್ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದೆ. ಬೆಂಗಳೂರಿಗೆ ಆಗಮಿಸಿರುವ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬ್ಯಾಕ್ ಟು ಬ್ಯಾಕ್ ಸಭೆ ನಡೆಸುತ್ತಿದ್ದು, ಅತೃಪ್ತ ಶಾಸಕರಿಂದ ಇಂಚಿಂಚೂ ಮಾಹಿತಿ ಪಡೆಯುತ್ತಿದ್ದಾರೆ. ಈ ನಡುವೆಯೇ ಮುಂದಿನ ಎರಡೂವರೆ ವರ್ಷಕ್ಕೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಬ್ಯಾಟ್ ಬೀಸಿದ್ದಾರೆ.
ರಾಮನಗರದಲ್ಲಿ ಮಾತನಾಡಿರುವ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ನನ್ನ ಕ್ಷೇತ್ರದ ಅಭಿವೃದ್ದಿ ಬಗ್ಗೆ ನಾನು ಹೇಳುತ್ತೇನೆ. ಶಿವಕುಮಾರ್ ಅವರಿಗೆ ಅವಕಾಶ ನೀಡಬೇಕು. ಪಕ್ಷ ಸಂಘಟನೆ ಮಾಡಿದ್ದಾರೆ. ಇತಿಹಾಸದ ಪುಟದಲ್ಲಿ ಹೊಸ ಭಾಷ್ಯ ಬರೆದಿದ್ದಾರೆ. ಸರ್ಕಾರ ಬರಲು ಡಿಕೆಶಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎಲ್ಲರಿಗೂ ಗೊತ್ತಿದೆ, ಎಲ್ಲ ಶಾಸಕರು ಬೆಂಬಲ ಕೊಡುತ್ತಾರೆ. ಶಾಸಕರ ಬೆಂಬಲದ ಜೊತೆಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಬೇಕು. ಸಾಕಷ್ಟು ಶಾಸಕರು ಬದಲಾವಣೆ ಬೇಕು ಅಂತಿದ್ದಾರೆ, ನಾನು ಕೈ ಜೋಡಿಸಿದ್ದೇನೆ ಎಂದಿದ್ದಾರೆ.
ಕ್ರಾಂತಿಯಲ್ಲ ಬದಲಾವಣೆ
ಸೆಪ್ಟೆಂಬರ್ ನಲ್ಲಿ ಕ್ರಾಂತಿ ಎಂಬ ರಾಜಣ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಕಾಂತ್ರಿ ಅಲ್ಲ, ಇದು ಬದಲಾವಣೆಯಾಗಿದೆ. ಇದು ಸಂಘಟನಕಾರ ಹೋರಾಟಗಾರನಿಗೆ ಕೊಡುವ ಅವಕಾಶವಾಗಿದೆ. ಕಾಂಗ್ರೆಸ್ ಬಿದ್ದು ಬಿಜೆಪಿ ಬಂದರೆ ಕಾಂತ್ರಿ ಅನ್ನುತ್ತೇವೆ. ಇದು ಬದಲಾವಣೆ ಅಷ್ಟೇ ಇದು ಕಾಂತ್ರಿ ಅಲ್ಲ. ಈ ಅವಧಿಯಲ್ಲಿ ಡಿಕೆ ಶಿವಕುಮಾರ್ ಅವರು ಎರಡೂವರೆ ವರ್ಷ ಸಿಎಂ ಆಗಬೇಕು ಎಂಬುದೇ ನಮ್ಮ ಅಭಿಲಾಷೆ ಎಂದಿದ್ದಾರೆ.