ಬೆಂಗಳೂರು:- ಕರ್ನಾಟಕ ಆರೋಗ್ಯ ಇಲಾಖೆಯು, ಕ್ಯಾನ್ಸರ್ ರೋಗಿಗಳಿಗೆ ಗುಡ್ನ್ಯೂಸ್ ನೀಡಿದೆ. ಕರ್ನಾಟಕದ 16 ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಆರಂಭವಾಗಲಿವೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಘೋಷಿಸಿದ್ದಾರೆ.
ಇನ್ಮುಂದೆ ಜಿಲ್ಲಾ ಆಸ್ಪತ್ರೆಗಳಲ್ಲೂ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯಬಹುದು. ಪ್ರತಿ ವರ್ಷ ಹೊಸದಾಗಿ 70 ಸಾವಿರ ಕ್ಯಾನ್ಸರ್ ಪ್ರಕರಣ ದಾಖಲಾಗುತ್ತಿದೆ. ಬಡವರು ಕಡಿಮೆ ವೆಚ್ಚದಲ್ಲಿ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯಬೇಕು ಅಂದರೆ ಬೆಂಗಳೂರಿನ ಕಿದ್ವಾಯಿ ಅಂತಹ ಸಂಸ್ಥೆಗಳಿಗೆ ಬರಬೇಕು. ಇದೂ ಕೂಡ ಕಷ್ಟದ ಕೆಲಸ. ಹಾಗಾಗಿ ಬಡವರಿಗೆ ಅನುಕೂಲ ಆಗಲಿ ಎಂದು 16 ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಓಪನ್ ಮಾಡುತ್ತೇವೆ ಎಂದರು.
ಆಪ್ತ ಸಮಾಲೋಚನೆ, ಮೆಡಿಕಲ್ ಅಂಕಾಲಜಿಸ್ಟ್, ವೈದ್ಯರು ಹಾಗೂ ಫಾರ್ಮಾಸಿ ಅಧಿಕಾರಿಗಳು ಕಿಮೋಥೆರಪಿ ಕೇಂದ್ರಗಳಲ್ಲಿ ಇರುತ್ತಾರೆ. ರೋಗಿಗಳು ಹೆಚ್ಚಾಗುತ್ತಿದೆ, ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಿದೆ. ಶೇಕಡಾ 60ರಷ್ಟು ರೋಗಿಗಳು ಬೆಂಗಳೂರು ನಗರ, ಹುಬ್ಬಳ್ಳಿ, ಕಲಬುರಗಿ, ಬೆಳಗಾವಿ ಮತ್ತು ಮೈಸೂರಿನಲ್ಲಿ ಕಿಮೋಥೆರಪಿಗಾಗಿ 100 ಕಿ.ಮೀ. ದೂರು ಹೋಗಬೇಕು. ಲಾಜಿಸ್ಟಿಕ್ ಕಾರಣದಿಂದ ಹೆಚ್ಚಿನ ರೋಗಿಗಳು ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ. ಸಮಯ ಮತ್ತು ತೊಂದರೆ ಜೊತೆಗೆ ಖರ್ಚು ಹೆಚ್ಚಾಗುತ್ತಿದೆ. ಆದರೆ ಇನ್ಮುಂದೆ ಅಂತಹ ಸಮಸ್ಯೆಗಳು ಕಡಿಮೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗಾಗಿ 10 ಬೆಡ್ ಮೀಸಲು ಇಡುತ್ತೇವೆ. ಅದಕ್ಕೆ ಇಬ್ಬರು ನರ್ಸ್ ಗಳು ಇರುತ್ತಾರೆ. ಅಲ್ಲದೇ ಆಪ್ತ ಸಮಾಲೋಚನೆ, ಮೆಡಿಕಲ್ ಅಂಕಾಲಜಿಸ್ಟ್, ವೈದ್ಯರು ಹಾಗೂ ಫಾರ್ಮಾಸಿ ಅಧಿಕಾರಿಗಳು ಇರುತ್ತಾರೆ. ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಕಿಮೋಥೆರಪಿ ಸಿಗಲಿದೆ ಎಂದು ಮಾಹಿತಿ ನೀಡಿದರು.