ಬೆಂಗಳೂರು: ಕಾನೂನು ಕಾಯ್ದೆಗೆ ವಿರುದ್ಧವಾಗಿ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ದೇವನಹಳ್ಳಿ ತಾಲೂಕಿನ ಚನ್ನಾರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ತಲೆಯೆತ್ತುವುದನ್ನು ವಿರೋಧಿಸಿ ಚಳುವಳಿ ನಡೆಸುತ್ತಿರುವ ರೈತಮುಖಂಡರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಭೆ ನಡೆಸಿದರು.
ರೈತರ ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾನೂನು ಕಾಯ್ದೆಗೆ ವಿರುದ್ಧವಾಗಿ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ನಿಯಮಾನುಸಾರ ಅಂತಿಮ ನೋಟಿಫಿಕೇಶ್ ಆಗಿರುವ ಕಾರಣ, ಅದರ ಕಾನೂನು ಅಂಶಗಳನ್ನು ಪರಿಶೀಲಿಸುವ ಅಗತ್ಯವಿದೆ. ಈ ಕುರಿತು ನಿನ್ನೆ ಪೂರ್ವಭಾವಿ ಸಭೆ ನಡೆಸಿದ್ದೇವೆ.
ಇಂದೇ ಸರ್ಕಾರದ ನಿಲುವು ಪ್ರಕಟಿಸಲು ಸಾಧ್ಯವಿಲ್ಲ. 10 ದಿನಗಳ ಬಳಿಕ ಮತ್ತೆ ಸಭೆ ನಡೆಸಿ ಸರ್ಕಾರದ ನಿಲುವು ಸ್ಪಷ್ಟಪಡಿಸಲಾಗುವುದು. ನಾವು ಪ್ರಜಾಪ್ರಭುತ್ವದಲ್ಲಿ ಮತ್ತು ಸಂವಾದದಲ್ಲಿ ನಂಬಿಕೆಯಿರುವವರು. ಪ್ರತಿಭಟನೆಗೆ ಯಾವುದೇ ಅಡ್ಡಿಪಡಿಸಿಲ್ಲ. ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಸರ್ಕಾರ ಮಾಡಿಲ್ಲ. ನಾನೂ ರೈತ ಸಂಘದಲ್ಲಿದ್ದವನು ಎಂದು ಸಿಎಂ ರೈತರಿಗೆ ತಿಳಿಸಿದ್ದಾರೆ.