ದೇವನಹಳ್ಳಿ : ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದರ ಜತೆಗೆ, ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ರಾಜ್ಯದ ಜನರ ಋಣ ತೀರಿಸುವ ಕೆಲಸ ಮಾಡುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ದೇವನಹಳ್ಳಿಯಲ್ಲಿ ಭಾನುವಾರ ನಡೆದ ಸಾಧನಾ ಸಮಾವೇಶ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದ ಅವರು, ಇದು ಸಾಧನೆಯ ಸಮಾವೇಶ. ಅಧಿಕಾರ ನಶ್ವರ, ಸಾಧನೆಗಳು ಅಜರಾಮರ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನೇ ಈಶ್ವರ. ರಾಜ್ಯದ ಮತದಾರರು 136 ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿ ನಮಗೆ ಅಧಿಕಾರ ಕೊಟ್ಟಿದ್ದೀರಿ. ಇಬ್ಬರು ಪಕ್ಷೇತರರು ಹಾಗೂ ಮತ್ತಿಬ್ಬರು ಶಾಸಕರು ಉಪಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಆಮೂಲಕ ನಮ್ಮದು 140 ಸಂಖ್ಯಾಬಲದ ಸರ್ಕಾರ. ಈ ಸರ್ಕಾರ ಇಂದು ನಿಮ್ಮ ಋಣ ತೀರಿಸುವ ಕೆಲಸ ಮಾಡಿದೆ ಎಂದರು. ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಮುನಿಯಪ್ಪ ಅವರ ನೇತೃತ್ವದಲ್ಲಿ ಶರತ್ ಬಚ್ಛೆಗೌಡ ಶ್ರೀನಿವಾಸ್ ವೆಂಕಟರಮಣಪ್ಪ ಅವರ ಸಹಕಾರ ಪರಿಷತ್ ಸದಸ್ಯರಾದ ರಾಮೋಜಿ ಗೌಡರು ಹಾಗೂ ರವಿ ಅವರ ಬೆಂಬಲದೊಂದಿಗೆ ಜಿಲ್ಲೆಯಲ್ಲಿ ಅದ್ಭುತವಾದ ಸಾಧನೆ ಮಾಡಲಾಗಿದೆ ಎಂದರು.
ಹಸಿದವನಿಗೆ ಅನ್ನದ ಬೆಲೆ, ಕಷ್ಟ ಅನುಭವಿಸದವನಿಗೆ ತಾಳ್ಮೆ ಬೆಲೆ ತಿಳಿಯುತ್ತದೆ. ಸೋತವನಿಗೆ ಗೆಲುವಿನ ದಾರಿ ತಿಳಿಯುತ್ತದೆ. ಅದೇ ರೀತಿ ಕಳೆದ ಸರ್ಕಾರದಲ್ಲಿ ಜನ ಅನುಭವಿಸಿದ ಕಷ್ಟ ನೋಡಿ ನಾವು ಈ ಯೋಜನೆಗಳನ್ನು ನೀಡಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪುಟಾಣಿ ಮಕ್ಕಳಿಂದ ವೃದ್ಧಾರವರೆಗೆ ಎಲ್ಲಾ ವರ್ಗದ ಜನರಿಗೂ ಯೋಜನೆಗಳನ್ನು ನೀಡುತ್ತಾ ಬಂದಿದೆ. ಬಿಜೆಪಿ ಸರ್ಕಾರ ಯಾವುದಾದರೂ ಒಂದು ಇಂತಹ ಕಾರ್ಯಕ್ರಮ ನೀಡಿತ್ತಾ?” ಎಂದು ಪ್ರಶ್ನಿಸಿದರು.
ರೈತರ ವಿರುದ್ಧ ಬಿಜೆಪಿ ಪ್ರತಿಭಟನೆ
ವಿರೋಧ ಪಕ್ಷದವರು ಯಾರಿಗೋಸ್ಕರ ಹೋರಾಟ ಮಾಡುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕು. ದನ ಕಾರುಗಳ ಮೇವು, ಇಂಡಿ, ಬೂಸಾ ಬೆಲೆ ಹೆಚ್ಚಾಗಿದೆ ಎಂದು ರೈತರು ಕಂಗಾಲಾಗಿದ್ದರು. ಅವರಿಗೆ ನೆರವಾಗಲು ನಮ್ಮ ಸರ್ಕಾರ ಹಾಲಿನ ಬೆಲೆ ಏರಿಕೆ ಮಾಡಿದೆ. ನಮ್ಮ ರಾಜ್ಯದಲ್ಲಿ ಬೆಲೆ ಏರಿಕೆಯಾದರೂ ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲೇ ಹಾಲಿನ ಬೆಲೆ ಕಡಿಮೆ ಇದೆ. ರೈತರ ನೆರವಿಗೆ ಧಾವಿಸಿದ ನಮ್ಮ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಿದೆ. ಆಮೂಲಕ ಬಿಜೆಪಿ ರೈತರ ವಿರುದ್ಧ ಹೋರಾಟ ಮಾಡುತ್ತಿದೆ” ಎಂದು ವಾಗ್ದಾಳಿ ನಡೆಸಿದರು.