ಧಾರವಾಡ : ಕಲಘಟಗಿ ತಾಲೂಕಿನ ಬಹು ನಿರೀಕ್ಷಿತ ಯೋಜನೆಯಾದ ಬೇಡ್ತಿ ನದಿ ಏತ ನೀರಾವರಿ ಮೂಲಕ 107 ಕೆರೆಗಳನ್ನು ತುಂಬಿಸುವ ಎರಡನೇ ಹಂತದ ಯೋಜನೆಗೆ ರಾಜ್ಯ ಸರಕಾರ 180 ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಿದೆ. ತಾಲೂಕಿನ ಬೆಲವಂತರ ಬಳಿ ಈಗಾಗಲೇ ಮೊದಲನೇ ಹಂತದ ಕಾಮಗಾರಿ ಸಂಪೂರ್ಣಗೊಂಡಿದೆ.
ಪ್ರಾಯೋಗಿಕವಾಗಿ ಈಗಾಗಲೇ ಕೆರೆಗಳಿಗೆ ನೀರು ಹರಿಸಿ ತುಂಬಿಸಲಾಗಿದೆ. ಈ ಯೋಜನೆಯನ್ನು ಇನ್ನಷ್ಟು ವಿಸ್ತರಿಸಿ ಇನ್ನುಳಿದ ಕೆರೆಗಳನ್ನು ತುಂಬಿಸಬೇಕು ಎಂದು ಕಲಘಟಗಿ ಶಾಸಕರಾದ ಸಚಿವ ಸಂತೋಷ ಲಾಡ್ ಅವರಿಗೆ ತಾಲೂಕಿನ ರೈತರು ಮನವಿ ಮಾಡಿದ್ದರು.
ರೈತರ ಬೇಡಿಕೆ ಅರಿತು ಸಚಿವರು ರಾಜ್ಯ ಸರಕಾರಕ್ಕೆ ಈ ಕುರಿತು ಪ್ರಸ್ತಾವ ಸಲ್ಲಿಸಿದ್ದರು. ಸಚಿವ ಸಂತೋಷ ಲಾಡ್ ಅವರ ಪ್ರಸ್ತಾವಕ್ಕೆ ಸ್ಪಂದಿಸಿರುವ ರಾಜ್ಯ ಸರ್ಕಾರ, ಕರ್ನಾಟಕ ನೀರಾವರಿ ನಿಗಮದ ನಿರ್ದೇಶಕರ ಮಂಡಳಿಯ 105ನೇ ಸಭೆಯಲ್ಲಿ 107 ಕೆರೆ ತುಂಬಿಸುವ ಎರಡನೇ ಹಂತದ ಬೇಡ್ತಿ ನದಿ ಏತ ನೀರಾವರಿ ಯೋಜನಾ ವರದಿಗೆ 180 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಈ ಕುರಿತು ಸಚಿವ ಸಂತೋಷ ಲಾಡ್ ಅವರಿಗೆ ಪತ್ರ ಬರೆದಿರುವ ಉಪ ಮುಖ್ಯಮಂತ್ರಿ, ಬೃಹತ್ ನೀರಾವರಿ ಸಚಿವರೂ ಆದ ಡಿ.ಕೆ.ಶಿವಕುಮಾರ, ಕಲಘಟಗಿ ವಿಧಾನಸಭಾ ಕ್ಷೇತ್ರ ಮಟ್ಟದ ಜಲಸಂಪನ್ಮೂಲ ಇಲಾಖೆಯ ಅಧಿ ಕಾರಿಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಈ ಯೋಜನೆ ತ್ವರಿತವಾಗಿ ಅನುಷ್ಠಾನಗೊಳಿಸಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.