ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ಏಪ್ರಿಲ್ 25-26ರಂದು ನಡೆದ ಸಂಗೀತ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಮತ್ತು ಭಾವನಾತ್ಮಕವಾಗಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿರುವ ಆರೋಪದ ಮೇಲೆ ಖ್ಯಾತ ಗಾಯಕ ಸೋನು ನಿಗಮ್ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮರಾಜ್ ಎ. ಅವರು ಈ ದೂರು ಸಲ್ಲಿಸಿದ್ದರು.
ಸೋನು ನಿಗಂ ಅವರ ಮತಿಹೀನ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕನ್ನಡಪರ ಸಂಘಟನೆಗಳು ಸೋನು ನಿಗಂ ವಿರುದ್ಧ ದೂರು ದಾಖಲಿಸಿವೆ. ಕನ್ನಡ ಚಿತ್ರರಂಗ ಸೋನು ನಿಗಂ ಅವರನ್ನು ನಿಷೇಧಿಸಬೇಕೆಂದು ಸಹ ಒತ್ತಾಯಿಸಲಾಗಿದೆ.
ಕನ್ನಡ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಸದಸ್ಯರು ಸೋನು ನಿಗಂ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕನ್ನಡಿಗರ ಕನ್ನಡ ಪ್ರೇಮವನ್ನು ಭಯೋತ್ಪಾದಕತೆಗೆ ಹೋಲಿಸಿದ ಸೋನು ನಿಗಂ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ವಿವಾದದ ಬಗ್ಗೆ ಮಾತನಾಡಿರುವ ಕರವೇ ಅಧ್ಯಕ್ಷ ನಾರಾಯಣಗೌಡ ಅವರು, ‘ಸೋನು ನಿಗಂ ಒಬ್ಬ ಸಾಂಸ್ಕೃತಿಕ ಭಯೋತ್ಪಾದಕ. ಸೋನು ನಿಗಮ್ ಕನ್ನಡದಿಂದ ಬ್ಯಾನ್ ಮಾಡಬೇಕು, ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸುತ್ತಾನಾ? ಸೋನು ನಿಗಂ ಈ ಕೂಡಲೇ ಕನ್ನಡಿಗರ ಕ್ಷಮೆ ಕೇಳಬೇಕು, ಇಲ್ಲವಾದರೆ ಸೋನು ನಿಗಮ್ ಕನ್ನಡ ಹಾಡು ಹಾಡುವಂತಿಲ್ಲ, ಸೋನು ನಿಗಂ ಮೇಲೆ ನಿಷೇಧ ಹೇರಬೇಕು ಎಂದು ಕನ್ನಡ ಚಲನಚಿತ್ರ ಮಂಡಳಿ, ನಿರ್ಮಾಪಕ ಸಂಘಕ್ಕೆ ಆಗ್ರಹಿಸುತ್ತೇನೆ’ ಎಂದಿದ್ದಾರೆ.
ಸೋನು ನಿಗಮ್ ಹೇಳಿದ್ದೇನು?
ಬೆಂಗಳೂರಿನ ಕಾಲೇಜೊಂದರಲ್ಲಿ ಸೋನು ನಿಗಂ ಲೈವ್ ಗಾಯನಗೋಷ್ಠಿ ಆಯೋಜಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹಾಡುವಂತೆ ಒತ್ತಾಯಿಸಿದ ಆಗ ಮಾತನಾಡಿದ ಸೋನು ನಿಗಂ, ‘ಕನ್ನಡ, ಕನ್ನಡ.. ಇದರಿಂದಲೇ ಪಹಲ್ಗಾಮ್ ದಾಳಿ ಆಗಿರುವುದು’ ಎಂದು, ಕನ್ನಡಿಗರ ಕನ್ನಡಾಭಿಮಾನವನ್ನು ಭಯೋತ್ಪಾದಕತೆಗೆ ಹೋಲಿಸಿದ್ದರು. ಸೋನು ನಿಗಂ ಅವರ ಈ ಹೇಳಿಕೆಗೆ ಕನ್ನಡಿಗರ ಒಕ್ಕೂರಲ ಆಕ್ರೋಶ ವ್ಯಕ್ತವಾಗಿದೆ.