ಉತ್ತರ ಕನ್ನಡ:– ಉತ್ತರ ಕನ್ನಡ ಜಿಲ್ಲೆಯ ಅರಬ್ಬಿ ಸಮುದ್ರದಲ್ಲಿ ಗಾಳಿಯ ವೇಗ ಹೆಚ್ಚಾಗಿ ಅಲೆಗಳ ಅಬ್ಬರ ಹೆಚ್ಚಾಗಿದೆ.
ಹೀಗಾಗಿ, ಮೀನುಗಾರಿಕೆ ನಿರ್ಬಂಧಿಸಿರುವ ಉತ್ತರ ಕನ್ನಡ ಜಿಲ್ಲಾಡಳಿತ, ಮೀನುಗಾರಿಕೆಗಾಗಿ ಸಮುದ್ರದಾಳಕ್ಕೆ ಹೊದವರನ್ನು ಹಿಂತಿರುಗುವಂತೆ ಸೂಚಿಸಿದೆ. ಅಲ್ಲದೆ, ಮೇ 22 ರ ವರೆಗೆ ದಿನ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಸಮುದ್ರಕ್ಕೆ ಯಾವುದೇ ಬೋಟ್ಗಳು ಇಳಿಯದಂತೆ ಖಡಕ್ ಸೂಚನೆ ನೀಡಲಾಗಿದೆ. ಹಾಗೇ, ಜಿಲ್ಲಾಡಳಿತ ಅಂಗನವಾಡಿ ಕೇಂದ್ರಗಳಿಗೆ ಬುಧವಾರ ರಜೆ ಘೋಷಿಸಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮಾತನಾಡಿ, ಮೇ. 22ರವರೆಗೆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಸಾರ್ವಜನಿಕರು ಹೊರಗಡೆ ಹೊದಾಗ ಮುನ್ನೆಚ್ಚರಿಕೆ ವಹಿಸಬೇಕು. ತಾಲೂಕು ಮತ್ತು ಜಿಲ್ಲಾ ಕೇಂದ್ರದಲ್ಲಿ ಕಂಟ್ರೋಲ್ ರೂಂ ಪ್ರಾರಂಭ ಮಾಡಲಾಗಿದೆ. 24X7 ಕಂಟ್ರೋಲ್ ರೂಂ ಕಾರ್ಯನಿರ್ವಹಿಸುತ್ತಿದ್ದು ಅವಘಡ ಸಂಭವಿಸಿದಾಗ ಸಂಪರ್ಕಿಸಬಹುದು. ಜಿಲ್ಲೆಯಲ್ಲಿನ 439 ಭೂ ಕುಸಿತ ಸ್ಥಳಕ್ಕೆ ಸ್ಪಾಟರ್ಸ್ ನೇಮಕ ಮಾಡಲಾಗಿದೆ ಎಂದು ಹೇಳಿದರು.
ಜೂನ್ ತಿಂಗಳಿನಿಂದ ಸ್ಪಾಟರ್ಸ್ ನಿಗದಿತ ಸ್ಥಳದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಕಳೆದ ಬಾರಿ ಮರ ಬಿದ್ದು ಕೆಲವು ಕಡೆ ಸಾವು ಆಗಿದ್ದರಿಂದ, ಅಪಾಯದ ಮರಗಳನ್ನು ತೆರವು ಮಾಡುವ ಕೆಲಸ ಅರಣ್ಯ ಇಲಾಖೆ ಮಾಡುತ್ತಿದೆ. ಜಲ ಸಾಹಸ ಕ್ರಿಡೆಗಳನ್ನು ಮಾನ್ಸೂನ ಮುಗಿಯೊವರೆಗೂ ನಿರ್ಬಂಧಿಸಲಾಗಿದೆ. ಮಾನ್ಸೂನ್ ಮುಗಿಯೊವರೆಗೂ ಫಾಲ್ಸ್ ಹಾಗೂ ಟ್ರೆಕ್ಕಿಂಗ್ ಸ್ಥಳಗಳಿಗೆ ನಿರ್ಬಂಧ ವಿಧಿಸಲಾಗುವುದು. ಅರಣ್ಯ ಇಲಾಖೆಯಿಂದ ಸಿಬ್ಬಂಧಿಗಳನ್ನು ನಿಯೋಜಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.