ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಬರ್ಬರ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಗೆ ವರ್ಗಾಯಿಸಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಆಗ್ರಹಿಸಿದ್ದಾರೆ. ಈ ಕುರಿತು ಬ್ರಿಜೇಶ್ ಚೌಟ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ಸುಹಾಸ್ ಶೆಟ್ಟಿ ಬರ್ಬರ ಹತ್ಯೆ ಘಟನೆಯಿಂದ ನಾನು ದಿಗ್ಭ್ರಮೆಗೊಂಡಿದ್ದು, ಭೀಕರ ಕೊಲೆ ಕೃತ್ಯದ ಕುರಿತು ತೀವ್ರ ಆತಂಕ ಮತ್ತು ನೋವಿನಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ. ಈ ಘಟನೆಯು ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಹೆಚ್ಚುತ್ತಿರುವ ಕಾನೂನುಬಾಹಿರತೆ, ಬಲಗೊಳ್ಳುತ್ತಿರುವ ಇಸ್ಲಾಮಿಕ್ ಮೂಲಭೂತವಾದ ಮತ್ತು ರಾಷ್ಟ್ರ ವಿರೋಧಿ ಶಕ್ತಿಗಳ ಅಟ್ಟಹಾಸಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಸುಹಾಸ್ ಶೆಟ್ಟಿ ಹತ್ಯೆಯು ಕರಾವಳಿ ಮಾತ್ರವಲ್ಲ, ಇಡೀ ರಾಜ್ಯದ ಜನರನ್ನೇ ಬೆಚ್ಚಿ ಬೀಳುವಂತೆ ಮಾಡಿದೆ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಹಿಂದೂಗಳು ಹೆದರಿ ಬದುಕಬೇಕಾದ ಸ್ಥಿತಿ ನಿರ್ಮಾಣ ; ಹತ್ಯೆಗೊಳಗಾದ ಸುಹಾಶ್ ಶೆಟ್ಟಿ ತಾಯಿ
ತಮ್ಮ ಮಗನನ್ನು ಕಳೆದುಕೊಂಡಿರುವ ಸುಹಾಸ್ ಶೆಟ್ಟಿ ಅವರ ಕುಟುಂಬವು ದಿಗ್ಭ್ರಾಂತಗೊಂಡು ನ್ಯಾಯಕ್ಕಾಗಿ ಕಾಯುತ್ತಿದೆ. ಈ ಭಾಗದ ಚುನಾಯಿತ ಪ್ರತಿನಿಧಿಯಾಗಿ ಮತ್ತು ಇಲ್ಲಿನ ನೋವು ಹಾಗೂ ಹತಾಶೆಯನ್ನು ವೈಯಕ್ತಿಕವಾಗಿ ಕಂಡಿರುವ ವ್ಯಕ್ತಿಯಾಗಿ, ಈ ಪ್ರಕರಣದ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ಈ ಕೂಡಲೇ ಎನ್‌ಐಎಗೆ ಹಸ್ತಾಂತರಿಸಬೇಕೆಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.