ಮಂಗಳೂರು: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಭೀಕರವಾಗಿ ಹತ್ಯೆ ಮಾಡಲಾಗಿದೆ. ಬಜ್ಪೆ ಕಿನ್ನಿಪದವು ಎಂಬಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ತನ್ನ ಸ್ನೇಹಿತರೊಂದಿಗೆ ಇನ್ನೋವಾ ಕಾರಿನಲ್ಲಿ ಬರುತ್ತಿದ್ದ ವೇಳೆ, ಮೀನಿನ ಟೆಂಪೋ ಗುದ್ದಿಸಿ ಬಳಿಕ, ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ.
ಸುಹಾಸ್ ಶೆಟ್ಟಿ ಬರುತ್ತಿದ್ದ ಇನ್ನೋವಾ ಕಾರನ್ನು ಮೀನಿನ ಟೆಂಪೋ ಹಾಗೂ ಒಂದು ಸ್ವಿಫ್ಟ್ ಕಾರು ಹಿಂಬಾಲಿಸಿಕೊಂಡು ಬಂದಿತ್ತು ಎನ್ನಲಾಗಿದೆ. ಇನ್ನೂ ಡಿಕ್ಕಿ ಹೊಡೆದ ರಭಸಕ್ಕೆ ಇನ್ನೋವಾ ಕಾರು ಸಲೂನ್ ಒಳಗೆ ನುಗ್ಗಿದೆ. ಬಳಿಕ ಸ್ವಿಫ್ಟ್ ಕಾರಿನಲ್ಲಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕೂಡಲೇ ಸುಹಾಸ್ನನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಘಟನೆ ಬಳಿಕ ಮಂಗಳೂರಿನ ಹಲವೆಡೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಮಂಗಳೂರು ನಗರಕ್ಕೆ ಹೆಚ್ಚಿನ ಪೊಲೀಸರ ನಿಯೋಜಿಸಲಾಗಿದೆ.
ಯಾರು ಈ ಸುಹಾಶ್ ಶೆಟ್ಟಿ..?
ಸುರತ್ಕಲ್ನ ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಸುಹಾಸ್ ಶೆಟ್ಟಿ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ 2022ರ ಜುಲೈ 28ರಂದು ಸುರತ್ಕಲ್ನಲ್ಲಿ ಫಾಜಿಲ್ ಹತ್ಯೆ ನಡೆದಿತ್ತು. ಈ ಹತ್ಯೆ ಪ್ರಕರಣದಲ್ಲಿ ಸುಹಾಸ್ ಶೆಟ್ಟಿ ಮತ್ತು ಇತರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಹಿಂದೆ ಬಜರಂಗದಳದ ಗೋರಕ್ಷಾ ವಿಭಾಗದ ಸದಸ್ಯನಾಗಿದ್ದ ಸುಹಾಸ್ ಶೆಟ್ಟಿಗೆ ಜೈಲಿನಿಂದ ಹೊರ ಬಂದ ನಂತರ ಯಾವುದೇ ಜವಾಬ್ದಾರಿ ಇರಲಿಲ್ಲ.