ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಹನಿಟ್ರ್ಯಾಪ್ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ಕಡೆಗೆ ವಿಪಕ್ಷಗಳು ಬೊಟ್ಟು ಮಾಡಿ ತೋರಿಸುತ್ತಿವೆ. ಮುಸ್ಲಿಮರಿಗಾಗಿ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದಿದ್ದರು ಎನ್ನಲಾದ ಡಿ.ಕೆ ಶಿವಕುಮಾರ್ ಹೇಳಿಕೆ ಕಾಂಗ್ರೆಸ್ ಹೈಕಮಾಂಡ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಬೆಳವಣಿಗೆಗಳ ಬೆನ್ನಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್ ನಾಳೆ ದೆಹಲಿಗೆ ತೆರಳಲು ಸಜ್ಜಾಗಿದ್ದಾರೆ.
ಗುರುವಾರ ನಡೆಯುವ ಕ್ಯಾಬಿನೆಟ್ ಮೀಟಿಂಗ್ ಬಳಿಕ ಸಂಜೆ ದೆಹಲಿಗೆ ತೆರಳಲಿರುವ ಡಿಕೆ ಶಿವಕುಮಾರ್, ಶುಕ್ರವಾರ ಎಲ್ಲಾ ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಜೊತೆ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಡೆಸುವ ಸಭೆಯಲ್ಲಿ ಭಾಗಿಯಾಗಲಿರುವ ಡಿಸಿಎಂ ಡಿಕೆ ಶಿವಕುಮಾರ್, ಈ ಮಧ್ಯೆಯೇ ಹೈಕಮಾಂಡ್ ನಾಯಕರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ. ಹನಿಟ್ರ್ಯಾಪ್ ವಿಚಾರವಾಗಿ ಹೈಕಮಾಂಡ್ ಗೆ ಡಿ.ಕೆ ಶಿವಕುಮಾರ್ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.
ಯುಗಾದಿಹಬ್ಬ ಬಳಿಕ ಸಿಎಂ ದಿಲ್ಲಿಗೆ
ಹನಿಟ್ರ್ಯಾಪ್ ಸಮರ ಜೋರು ಸದ್ದು ಮಾಡುತ್ತಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಲು ಮುಹೂರ್ತ ಫಿಕ್ಸ್ ಆಗಿದೆ. ಯುಗಾದಿ ಹಬ್ಬದ ಬಳಿಕ ಏಪ್ರಿಲ್ 2-3 ರಂದು ಸಿಎಂ ಸಿದ್ದರಾಮಯ್ಯ ದೆಹಲಿ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ.
ಏಪ್ರಿಲ್ ಮೊದಲ ವಾರ ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಭೇಟಿ ಮಾಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಂಎಲ್ಸಿ ನಾಮನಿರ್ದೇಶನ, ಹನಿಟ್ರ್ಯಾಪ್, ಪಕ್ಷದ ಗೊಂದಲಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಸದ್ಯ ಕಾಲು ನೋವಿನ ನಡುವೆಯೂ ಸಿಎಂ ಸಿದ್ದರಾಮಯ್ಯ ದೆಹಲಿ ಭೇಟಿ ಕುತೂಹಲ ಮೂಡಿಸಿದೆ. ಕಳೆದ ವಾರವಷ್ಟೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದಲ್ಲದೆ, ದೆಹಲಿಗೆ ಬರುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಏಪ್ರಿಲ್ ಮೊದಲ ವಾರದಲ್ಲಿ ಹೈಕಮಾಂಡ್ ಭೇಟಿಗೆ ದಿಲ್ಲಿ ಯಾತ್ರೆ ಕೈಗೊಂಡಿರುವುದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.