ಹುಬ್ಬಳ್ಳಿ:- ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಹನಿಟ್ರ್ಯಾಪ್ ವಿಚಾರವನ್ನು ಸದನದಲ್ಲಿ ಸ್ವತಃ ಹಿರಿಯ ಸಚಿವರಾದ ರಾಜಣ್ಣ ಹೇಳಿದ್ದಾರೆ. ಇದು ಗಂಭೀರವಾದ ಆರೋಪ. ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕಿತ್ತು. ತಮ್ಮ ಸರ್ಕಾರದಲ್ಲಿ ಇಂತಹ ಪ್ರಕರಣ ನಡೆಯಿತು. ಇದರಿಂದ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯಲ್ಲ ಅಂತ ರಾಜಿನಾಮೆ ನೀಡಬೇಕಿತ್ತು. ಇಲ್ಲ ಸಿಡಿ ಮಾಡಿದವರು ಯಾರು ಅಂತಹವರನ್ನು ಸಂಪುಟದಿಂದ ವಜಾ ಮಾಡಬೇಕಿತ್ತು. ಮಾನ ಮರ್ಯಾದೆ ಇಲ್ಲದೆ ಅಧಿಕಾರಕ್ಕೆ ಅಂಟಿಕೊಂಡು ಕುಳಿತಿರುವುದು ಸರಿಯಲ್ಲ. ಇದನ್ನು ಇಡೀ ದೇಶ ನೋಡುತ್ತಿದೆ ಎಂದರು.
ಈ ಪ್ರಕರಣವನ್ನು ಸಿಬಿಐಗೆ ವಹಿಸಿ ನಿಷ್ಪಕ್ಷಪಾತವಾದ ತನಿಖೆ ನಡೆಸಬೇಕು. ರಾಜಕಾರಣಿಗಳ ಬಗ್ಗೆ ಗೌರವ ಕಡಿಮೆ ಆಗುತ್ತಿದೆ. ಸ್ವಚ್ಛ ನಡವಳಿಕೆಯಿಂದ ರಾಜಕಾರಣಿಗಳು ಆದರ್ಶವಾಗಿ ಕಾಣಬೇಕಿತ್ತು. ಆದರೆ ಇಂದು ರಾಜಕಾರಣಿಗಳು ರಾಕ್ಷಸರಾಗಿ ಕಾಣುತ್ತಿದ್ದಾರೆ. ಇನ್ನೂ ಕಾಲ ಮಿಂಚಿಲ್ಲ ಸಿದ್ದರಾಮಯ್ಯ ರಾಜಿನಾಮೆ ನೀಡಲಿ’ ಎಂದರು.
ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು. ಕಾಂಗ್ರೆಸ್ ಗೆ ಇದೊಂದು ಅವಕಾಶ. ಮಲ್ಲಿಕಾರ್ಜುನ ಖರ್ಗೆ ಕಾಲದಲ್ಲಿ ದಲಿತ ಸಿಎಂ ಕೂಗು ಎದ್ದಿತ್ತು. ಈಗ ಸ್ವತಃ ಅವರೇ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಕೇಳುವ ಸ್ಥಾನದಲ್ಲಿ ಇಲ್ಲ ಇಂದು ಅವರು ನೀಡುವ ಸ್ಥಾನದಲ್ಲಿ ಇದ್ದಾರೆ. ಹೀಗಾಗಿ ಒಂದು ಬಾರಿ ರಾಜ್ಯದಲ್ಲಿ ದಲಿತ ಸಿಎಂ ಮಾಡಿ ಸಾಮಾಜಿಕ ನ್ಯಾಯಕ್ಕೆ ಅವಕಾಶ ನೀಡಬೇಕು ಎಂದರು.